ಗದಗ: ಶಂಕಿತ ಡೆಂಘೀಗೆ ಬಾಲಕಿ ಬಲಿ
ಗದಗ: ಶಂಕಿತ ಡೆಂಘೀಗೆ ಬಾಲಕಿಯೊಬ್ಬಳು ನಗರದ ಗಂಗಿಮಡಿಯಲ್ಲಿ ಬಲಿಯಾಗಿದ್ದಾಳೆ.
ಗಂಗಿಮಡಿ ನಿವಾಸಿ ರಾಮು ಹಾಗೂ ಸುಮಾ ದಂಪತಿ ಮಗಳಾದ ಸುಜಾತಾ ವಡ್ಡೇಪಲ್ಲಿ (6) ಮೃತಪಟ್ಟವಳು.
10 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಯನ್ನು ನಗರದ ಹೆರಿಗೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ, ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ಆದಾಗ್ಯೂ ಜ್ವರ ಕಡಿಮೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಸುಜಾತಾ ಮೃತಳಾಗಿದ್ದಾಳೆ.