ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿನ ತೊಂದರೆಯಾಗದಂತೆ ಕ್ರಮಕೈಗೊಳ್ಳಿ

Lingaraj Badiger
Updated On : 30 May 2013, 11:26 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 29
ಮುಂಡರಗಿ ತಾಲೂಕಿನ ರೋಣ ಹಾಗೂ ಶಿರಹಟ್ಟಿ ಮತಕ್ಷೇತ್ರಕ್ಕೆ ಬರುವ ಯಾವುದೇ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬರೀ ಕಾಟಾಚಾರಕ್ಕೆ ಹೇಳಿದೀನಿ, ಮಾಡಿದೀನಿ ಅಂದ್ರ ಅಲ್ರಿ..ಮೊದ್ಲ ಜನರಿಗೆ ಕುಡ್ಯಾಕ ನೀರ್ಕೊಡ್ರಿ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಬಾಗೇವಾಡಿ, ಮುರುಡಿ, ಮುರುಡಿತಾಂಡಾ, ಬಿದರಹಳ್ಳಿ, ಕಕ್ಕೂರ, ವೆಂಕಟಾಪುರ, ಹಮ್ಮಿಗಿ ತಾಂಡಾ, ಅತ್ತಿಕಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆಯಾಗಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ನೀರಿಲ್ಲದ ಗ್ರಾಮಗಳಿಗೆ ತ್ವರಿತವಾಗಿ ನೀರೊದಗಿಸುವ ಕಾರ್ಯ ಮಾಡಬೇಕು. ಕೆಲವೆಡೆ ವಿದ್ಯುತ್ ಸಮಸ್ಯೆ ತೊಡಕಾಗಿದ್ದು, ಅಂತಹ ಗ್ರಾಮಗಳಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡಿ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಪಂಚಾಯತ್ರಾಜ್ ಇಲಾಖೆ ಅಧಿಕಾರಿ ಕೆ.ಬಿ. ಗಂಜಿಹಾಳ ಮಾತನಾಡಿ, ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಕುರಿತು ಶಾಸಕರಿಗೆ ವಿವರಣೆ ನೀಡಿ, ಸಮಸ್ಯೆ ಪರಿಹರಿಸಲು ತಮ್ಮ ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಕಕ್ಕೂರಿನಿಂದ 5 ಗ್ರಾಮಗಳಿಗೆ ಸರಬರಾಜು ಆಗುವ ತುಂಗಭದ್ರಾ ನೀರಿನ ಯೋಜನೆ ಕಾರ್ಯಗತವಾಗುತ್ತಿಲ್ಲ, ಹಿರೇವಡ್ಡಟ್ಟಿ ಗ್ರಾಮದಲ್ಲಿ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿಲ್ಲ ಎಂದು ಎಪಿಎಂಸಿ ಸದಸ್ಯ ಗೂಳಪ್ಪ ಆರೋಪಿಸಿದರು. ಅವುಗಳನ್ನು ಸ್ವತಃ ತಾವೇ ಭೇಟಿ ನೀಡಿ ಸರಿಪಡಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಪಡಿತರ ಚೀಟಿಯಲ್ಲಿ ಸಾಕಷ್ಟು ದೋಷಗಳಾಗಿದ್ದು, ಅವುಗಳ ಪರಿಶೀಲನೆ ಕಾರ್ಯ ಇದೀಗ ಪ್ರಾರಂಭವಾಗಿದ್ದು, ಜೂನ್ 15 ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಸರ್ಕಾರಿ ಎಲ್ಲ ಇಲಾಖೆಗಳ ಕಚೇರಿಗಳೂ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಕಾರಣ ಈಗಿರುವ ಮಿನಿ ವಿಧಾನಸೌಧ ಕಟ್ಟಡದ ಮೇಲೆ ಇನ್ನೆರಡು ಅಂತಸ್ತುಗಳನ್ನು ಮಾಡಲು ಯೋಜನೆ ಸಿದ್ಧಗೊಳಿಸುವಂತೆ ಶಾಸಕ ರಾಮಕೃಷ್ಣ ದೊಡ್ಡಮನಿ ಲೋಕೋಪಯೋಗಿ ಇಲಾಖೆ ಅಭಿಯಂತರ ಹುಬ್ಬಳ್ಳಿಮಠ ಅವರಿಗೆ ಸೂಚಿಸಿದರು.
ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಎಂ.ಎಂ. ಸೊಲ್ಲಾಪುರ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ 8  ವೈದ್ಯರ ಹುದ್ದೆಗಳಿದ್ದು, ಕೇವಲ ಓರ್ವ ದಂತ ವೈದ್ಯ ಮಾತ್ರ ಕೆಲಸ ಮಾಡುತ್ತಿದ್ದು, ಉಳಿದ 7 ಹುದ್ದೆಗಳು ಖಾಲಿಯಿದ್ದು, ವೈದ್ಯರನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಭೆಯಲ್ಲಿ ಹೆಸ್ಕಾನ ಮಂಜುಳಾ ಹಿರೇಮಠ, ಅರಣ್ಯ ಇಲಾಖೆಯ ವಿ.ಎಸ್. ಪರಿಮಳಾ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಅಧ್ಯಕ್ಷ ತಾರೂಬಾಯಿ ಚವ್ಹಾನ್, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಪಿ.ಎಂ.ಪಾಟೀಲ, ಎನ್.ಟಿ. ಪ್ಯಾಟಿ, ರಾಮಾಂಜನೇಯರಾಜು ಪೆನ್ಮತ್ಸಾ, ಮಿತುನ್ಗೌಡ ಪಾಟೀಲ, ಟಿ.ಬಿ. ಮೇಟಿ, ಡಿ.ಸಿ. ಪಾಟೀಲ, ಹೇಮಂತಗೌಡ ಪಾಟೀಲ ಹಾಗೂ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಪಂ ಇಓ ಎಸ್.ವಿ. ತಿಗರಿಮಠ ಸ್ವಾಗತಿಸಿದರು. ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ ನಿರೂಪಿಸಿದರು. ಎಂ.ಎ. ರಡ್ಡೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement