ಬಂಡಿ ಆರೋಪ ಸತ್ಯಕ್ಕೆ ದೂರ: ಜಿ.ಎಸ್. ಪಾಟೀಲ
ರೋಣ: ಸೋಲಿನ ಹತಾಶೆ ಭಾವನೆಯಿಂದ ಮಾಜಿ ಸಚಿವ ಕಳಕಪ್ಪ ಬಂಡಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ರೀತಿಯ ಹುರಳಿಲ್ಲ. ಅದು ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ವಸತಿ ಶಾಲೆಯನ್ನು ಯಾವುದೇ ನಿಗದಿತ ಸ್ಥಳದಲ್ಲಿ ಸ್ಥಾಪಿಸುವಂತೆ ಯಾವುದೇ ಸುತ್ತೋಲೆ ಬಂದಿಲ್ಲ. ಈಗಾಗಲೇ ಗಜೇಂದ್ರಗಡ ಭಾಗದಲ್ಲಿ 1999-2004ರ ಅವಧಿಯಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಿದ್ದೇವೆ. ಬಳಿಕ ಗಜೇಂದ್ರಗಡದಲ್ಲಿ ಕಿತ್ತೂರ ವಸತಿ ಶಾಲೆ, ಆದರ್ಶ ಶಾಲೆ, 3 ಸರ್ಕಾರಿ ಪ್ರೌಢ ಶಾಲೆಗಳು, ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳಿಂದ ಅಲ್ಲಿನ ಜನತೆಗೆ ಅನುಕೂಲವಾಗಿದೆ. ಯಾವುದಕ್ಕೂ ರಾಜಕೀಯ ಮಾಡಬೇಡಿ. ಒಂದು ಮತ ಕ್ಷೇತ್ರವನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಬಂದಂತಹ ಅನುದಾನ, ಸೌಲಭ್ಯವನ್ನು ಹಂಚಿ ಸಮತೋಲನ ಕಾಯ್ದುಕೊಳ್ಳುವುದು ಶಾಸಕರ ಕರ್ತವ್ಯ ಎಂದರು.
ಮಂಜೂರಾದ ಶಾಲೆಯ ಸ್ಥಳವನ್ನು ಆಯ್ಕೆ ಮಾಡುವ ಅಧಿಕಾರ ಆ ಕ್ಷೇತ್ರದ ಶಾಸಕನಿಗೆ ಇರುತ್ತದೆ. ವಾಜಪೇಯಿ ವಸತಿ ಶಾಲೆಯನ್ನು ರೋಣದಲ್ಲಿಯೇ ಪ್ರಾರಂಭಿಸುತ್ತೇನೆ. ಇದಕ್ಕೆ ಮುಂಬರುವ ದಿನದಲ್ಲಿ 15 ಎಕರೆ ಜಮೀನು ವ್ಯವಸ್ಥೆ ಮಾಡಲಾಗುವುದು.
ಹಿಂದಿನ ಶಾಸಕರು ಅಭಿವೃದ್ಧಿ ವಿಷಯದಲ್ಲಿ ವಿನಾಕಾರಣ ರಾಜಕೀಯ ಬಳಸಿ, ರೋಣ ಭಾಗದ ರೈತರ ಜಮೀನುಗಳನ್ನು ಪಡೆದುಕೊಂಡು ಅಲ್ಲಿ ಕೆರೆ ನಿರ್ಮಿಸಿ ರೋಣ ಪಟ್ಟಣದ ಜನತೆಗೆ ಆ ಕೆರೆಯ ನೀರು ದಕ್ಕದಂತೆ ಮಾಡಿದ್ದಾರೆ. ಇದು ಅವರಿಗೆ ನ್ಯಾಯವೇ ಎಂದರು ಪ್ರಶ್ನಿಸಿದರು.
ಮಾಜಿ ಸಚಿವ ಕಳಕಪ್ಪ ಬಂಡಿಯವರು ತಮ್ಮ ಅವಧಿಯಲ್ಲಿ ರೋಣ ಪಟ್ಟಣ ತಾಲೂಕು ಕೇಂದ್ರ ಎನ್ನುವುದನ್ನೇ ಮರೆತಿದ್ದರು. 2004 ರಿಂದ 2012ರ ವರೆಗೆ ತಾಲೂಕು ಕೇಂದ್ರದಲ್ಲಿ ಆಚರಿಸಬೇಕಾದ ಶಿಕ್ಷಕರ ದಿನಾಚರಣೆ ಹಾಗೂ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲಾ ಶಿಕ್ಷಕರ ದಿನಾಚರಣೆಯನ್ನು ಅವರ ಮನೆಯ ಅಂಗಳದಲ್ಲಿ ನಡೆಸಿದ್ದನ್ನು ಅವರು ಮರೆಯಬಾರದು. ಅವರ ಅಧಿಕಾರಾವಧಿಯಲ್ಲಿ ನಾನು ಎಂದು ಕಾಲೆಳೆಯುವ ಕೆಲಸ ಮಾಡಿಲ್ಲ. ಅದೇ ನೀತಿಯನ್ನು ಅವರೂ ಅನುಸರಿಸಬೇಕು. ಅಭಿವೃದ್ಧಿ ವಿಷಯದಲ್ಲಿ ನಾನು ನಿಮ್ಮಂತೆ ತಾರತಮ್ಯ ಮಾಡದೇ ಸಮಾನತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ದಶರಥ ಗಾಣಿಗೇರ, ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಬಸವರಾಜ ಮಲ್ಲಾಪುರ, ವೀರಯ್ಯ ಸೋಮನಕಟ್ಟಿ, ಸಂಗು ನವಲಗುಂದ, ಸುಭಾನ ಅರಗಿದ್ದಿ, ಶರಣಪ್ಪ ಕೊಟಗಿ, ಬಿ.ಎಂ. ಹಣಗಿ, ಬಾಬಣ್ಣ ನದಾಫ ಇದ್ದರು.