ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಾಣಂತಿ ಸಾವು: ಶವವಿಟ್ಟು ಪ್ರತಿಭಟನೆ

Rashmi Kasaragodu
Updated On : 29 May 2013, 11:31 am

ಕ.ಪ್ರ.ವಾರ್ತೆ   ಗದಗ   ಮೇ 29
ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ಬುಧವಾರ ಮೃತಪಟ್ಟಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಕಿಟಕಿಗಾಜು ಪುಡಿಪುಡಿ ಮಾಡಿದ್ದಾರೆ. ನ್ಯಾಯ ದೊರಕಿಸುವಂತೆ ಆಗ್ರಹಿಸಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದರು.
ಬೆಟಗೇರಿಯ ರೇಖಾ ತೇಗುಂಟೆ (28) ಎಂಬವರನ್ನು ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗೆ ಮಹಿಳೆಗೆ ತೀವ್ರ ಹೆರಿಗೆ ನೋವುಂಟಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಹಿಳೆಗೆ ತೀವ್ರ ರಕ್ತ ಸ್ರಾವವಾಗುತ್ತಿತ್ತು. ವೈದ್ಯರು ಮಹಿಳೆಯನ್ನು ನಿರ್ಲಕ್ಷಿಸಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಆಗ, ವೈದ್ಯರು ಮತ್ತು ದಾದಿಯರು ಬಾಣಂತಿಯ ಆರೋಗ್ಯ ಸಾಕಷ್ಟು ಬಿಗಡಾಯಿಸಿದೆ. ಕೂಡಲೇ ಬೇರೆ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಎಂದು ಹೇಳಿದ್ದು ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಯಿತು.
ಕಿಟಕಿ ಗಾಜು ಪುಡಿಪುಡಿ: ಆಕ್ರೋಶಗೊಂಡ ಸಂಬಂಧಿಕರು ಎಲ್ಲ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು. ಕೆ.ಸಿ. ರಾಣಿ ರಸ್ತೆಯಲ್ಲಿ ಮಧ್ಯಾಹ್ನ 4 ಗಂಟೆಯಿಂದ ಶವವಿಟ್ಟು ಪ್ರತಿಭಟಿಸುತ್ತಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ವೈದ್ಯರು ಹಾಗೂ ದಾದಿಯರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಮೃತರಿಗೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸಿಕೊಡಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರಿಂದ ಕೆಲ ಕಾಲ ಬಿಗುವಿನ ವಾತಾವಾರಣ ಸೃಷ್ಟಿಯಾಗಿತ್ತು.


ನಾನು ಈಗಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಸ್ಥೆತೆಯ ಬಗ್ಗೆ ಮಾಹಿತಿ ಇಲ್ಲ. ಆದರೆ, ಬುಧವಾರ ನಡೆದ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಟಿ ಎಸ್.ಟಿ. ಅಂಜನ್ಕುಮಾರ್, ಜಿಲ್ಲಾಧಿಕಾರಿ ಗದಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement