ಬಿಸಿಲಿಗೆ ಬಾಯಾರಿದ ಮುಂಡರಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 29
ಮುಂಡರಗಿ ತಾಲೂಕಿನಲ್ಲಿ ಬಳ್ಳಾರಿಯನ್ನು ಮೀರಿಸುವಂಥ ಬಿಸಿಲು. ಇಂಥ ಬೇಸಿಗೆಯಲ್ಲಿಯೂ ರೋಣ ವಿಧಾನಸಭಾ ಕ್ಷೇತ್ರಕ್ಕೆ ಬರುವ ತಾಲೂಕಿನ ಚಿಕ್ಕವಡ್ಡಟ್ಟಿ, ಮುರುಡಿ, ಗುಡ್ಡದಬೂದಿಹಾಳ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಬಾಗೇವಾಡಿ, ಹಮ್ಮಿಗಿ ತಾಂಡಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಬೇಸಿಗೆಯಲ್ಲಿ ಈ ಗ್ರಾಮಗಳ ಜನತೆ ಕುಡಿವ ನೀರಿಗಾಗಿ ರೈತರ ಹೊಲಗಳಲ್ಲಿರುವ ಪಂಪ್ಸೆಟ್ಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಇದೆ. ಬಾಗೇವಾಡಿ ಗ್ರಾಮದಲ್ಲಿ ಬೋರ್ವೆಲ್ ಪ್ರಾರಂಭಿಸಿದ್ದು, ಇದು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇಡೀ ಗ್ರಾಮಸ್ಥರಿಗೆ ಇದೊಂದೇ ಇರುವುದರಿಂದ ನೀರಿಗಾಗಿ ನಿತ್ಯ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅದಕ್ಕೆ ವಿದ್ಯುತ್ ಕೊರತೆಯೂ ಹೆಚ್ಚು ಕಾರಣವಾಗಿದೆ. ಕೇವಲ 3 ಗಂಟೆ ವಿದ್ಯುತ್ ದೊರೆಯುತ್ತಿದ್ದು ಈ ಸಮಯದಲ್ಲಿಯೇ ಎಲ್ಲರೂ ನೀರಿಗಾಗಿ ಕಾಯುತ್ತಿರುವುದು ಕಂಡು ಬರುತ್ತಿದೆ.
ಚಿಕ್ಕವಡ್ಡಟ್ಟಿ ಹಾಗೂ ಗುಡ್ಡದಬೂದಿಹಾಳ ಗ್ರಾಮಗಳಿಗೆ ಪ್ರತಿವರ್ಷ ನೀರಿನ ಬರ ತಪ್ಪಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಈ ಭಾಗಕ್ಕೆ ಬರುತ್ತಾರೆ. ನಂತರ ದಿನಗಳಲ್ಲಿ ಇತ್ತ ತಿರುಗಿ ನೋಡಲ್ಲ. ಇಲ್ಲಿನ ಬೇಡಿಕೆಗಳ ಕುರಿತು ಸ್ಪಂದಿಸುವುದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಇನ್ನೂ ಫ್ಲೋರೈಡ್ ಅಂಶವನ್ನು ಹೊಂದಿರುವ ವಿರೂಪಾಪುರ, ವಿರೂಪಾಪುರ ತಾಂಡಾಗಳಲ್ಲಿ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತಿದ್ದರೂ ಈ ಎರಡೂ ಗ್ರಾಮಗಳಿಗೆ ನದಿ ನೀರು ಸರಿಯಾಗಿ ತಲುಪುತ್ತಿಲ್ಲ. ಕುಡಿವ ನೀರನ್ನು ಪಕ್ಕದ ಕಲಕೇರಿ ಗ್ರಾಮಕ್ಕೆ ಬಂದು ಶುದ್ಧ ಘಟಕದಿಂದ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿದೆ.
ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಕಲಕೇರಿ, ವಿರುಪಾಪುರ, ವಿರುಪಾಪುರ ತಾಂಡಾ, ಮುಷ್ಟಿಕೊಪ್ಪ, ಸಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಬರದೂರ, ಮೇವುಂಡಿ, ಡಂಬಳ ಸೇರಿದಂತೆ 30 ಗ್ರಾಮಗಳಿಗೆ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತಿದ್ದು, ಇತ್ತೀಚೆಗೆ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ತುಂಗಭದ್ರಾ ನೀರನ್ನು ಅವಲಂಬಿಸಿರುವ ಎಲ್ಲ ಗ್ರಾಮಗಳಲ್ಲಿಯೂ ಸಾಕಷ್ಟು ತೊಂದರೆ ಉಂಟಾಗಿತ್ತು. ಆದರೆ, ಇದೀಗ ನದಿಗೆ ಒಂದಿಷ್ಟು ನೀರು ಬಂದಿರುವುದರಿಂದ ಈ ಎಲ್ಲ ಗ್ರಾಮಗಳಲ್ಲಿಯೂ ನೀರಿನ ತೊಂದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಗ್ರಾಮೀಣ ಭಾಗದ ಜನತೆಯ ನಿತ್ಯದ ಕಾರ್ಯಗಳಿಗೆ ಹಾಗೂ ದನಕರುಗಳಿಗೆ ನೀರಿಗಾಗಿ ತಾಲೂಕಿನಾದ್ಯಂತ 400ಕ್ಕೂ ಹೆಚ್ಚು ಕೈಪಂಪ್ಗಳನ್ನು ಹಾಕಲಾಗಿದೆ. ಕೆಲವು ಗ್ರಾಮಗಳಲ್ಲಿ ಜಲನಿರ್ಮಲ ಯೋಜನೆಯಿಂದ ನೀರಿನ ಸಮಸ್ಯೆ ಪರಿಹರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮುಂಡರಗಿಯ 23 ವಾರ್ಡ್ಗಳಲ್ಲಿ ಅಲ್ಲಲ್ಲಿ ಮೋಟರ್ಗಳನ್ನು ಹಾಕಿ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಕೆಲವು ವಾರ್ಡ್ಗಳಿಗೆ ಪುರಸಭೆ ಎದುರಿನಲ್ಲಿರುವ ಬೋರ್ವೆಲ್ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದೀಗ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತಿರುವುದರಿಂದ ಸಮಸ್ಯೆ ಅಲ್ಪ ಪ್ರಮಾಣದಲ್ಲಿ ಪರಿಹಾರವಾಗಿದೆ.
- ಆರ್.ಎಂ. ಪಾಟೀಲ
ಪುರಸಭೆ ಮುಖ್ಯಾಧಿಕಾರಿ
ಕಲಕೇರಿ ಗ್ರಾಪಂ ವ್ಯಾಪ್ತಿಗೆ ಬರುವ ವಿರೂಪಾಪುರ ಹಾಗೂ ವಿರೂಪಾಪುರ ತಾಂಡಾ ಈ ಎರಡೂ ಗ್ರಾಮಗಳಿಗೆ ಸಂಪೂರ್ಣವಾಗಿ ತುಂಗಭದ್ರಾ ನದಿ ನೀರು ಕೊಡುವ ಎಲ್ಲ ಪ್ರಯತ್ನ ಮಾಡುತ್ತಿದ್ದು, ಸ್ವಲ್ಪ ಪ್ರಮಾಣದ ತೊಂದರೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಕಲಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಕುಡಿವ ನೀರಿನ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು.
-ರಾಜಶೇಖರ ಮೇಟಿ
ಅಧ್ಯಕ್ಷರು, ಕಲಕೇರಿ ಗ್ರಾಪಂ.
-ಶರಣು ಸೊಲಗಿ