ಸಾರಾಯಿ ಅಂಗಡಿ ಎತ್ತಂಗಡಿ
ಮುಂಡರಗಿ: ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡದಂತೆ ಈಚೆಗೆ ತಾಲೂಕಿನ ಹಮ್ಮಿಗಿ ಗ್ರಾಮದ ಅನೇಕ ಮಹಿಳಾ ಸಂಘಟನೆಗಳು ಹಾಗೂ ಗ್ರಾಪಂ ಆಡಳಿತ ಮಂಡಳಿ ಗ್ರಾಮದಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರ ಪರಿಣಾಮ ಅಬಕಾರಿ ಇಲಾಖೆ ಬುಧವಾರ ಹಮ್ಮಿಗಿ ಗ್ರಾಮಕ್ಕೆ ಬಂದು ಸಾರಾಯಿ ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿನ ಎಲ್ಲ ಮಾಲನ್ನು ಬೇರೆಡೆ ವರ್ಗಾಯಿಸುವ ಮೂಲಕ ಗ್ರಾಮದಲ್ಲಿ ಸಾರಾಯಿ ಮಾರಾಟ ನಿಲ್ಲಿಸಿದೆ.
ಈ ಸಂದರ್ಭ ಮಹಿಳಾ ಸಂಘಟನೆಗಳ ಮುಖಂಡರು ಮಾತನಾಡಿ, ಗ್ರಾಮದಲ್ಲಿ ಮುಂದೆಯೂ ಸಾರಾಯಿ ಮಾರಾಟಕ್ಕೆ ಅವಕಾಶ ನೀಡಕೂಡದು. ಒಂದು ವೇಳೆ ಹೋಟೆಲ್ ಅಥವಾ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷೆ ಸಾವಿತ್ರವ್ವ ತಳವಾರ, ಉಪಾಧ್ಯಕ್ಷ ಇಸ್ಮಾಯಿಲ್ಖಾನ್ ತಂಬ್ರಳ್ಳಿ, ಈರಣ್ಣ ಮದ್ದೀನ, ಮಹಾಬೂಬಿ ಜವಳಿ, ಗೀತಾ ಉಪನಾಳ, ಮಂಜುಳಾ ಮುತ್ತೀನ, ಕಾಶವ್ವ ಕೊಡಮಗಿ ಮತ್ತಿತರರು ಪಾಲ್ಗೊಂಡಿದ್ದರು.