ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಾನಿ: ಮುಶಿಗೇರಿಗೆ ಎಸಿ ಭೇಟಿ, ಪರಿಶೀಲನೆ

Lingaraj Badiger
Updated On : 30 May 2013, 11:31 am

ರೋಣ: ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆರೆಗೆ ಹೋಗಬೇಕಾದ ನೀರು ಕೋಡಿಯ ಒಡ್ಡು ಕಿತ್ತ ಪರಿಣಾಮದಿಂದಾಗಿ ಹಾನಿಗೊಳಗಾದ ತಾಲೂಕಿನ ಮುಶಿಗೇರಿ ಗ್ರಾಮದ ದಲಿತ ಕೇರಿಯ ಮನೆಗಳಿಗೆ ಜಿಲ್ಲಾ ಉಪ ವಿಭಾಗಾಧಿಕಾರಿ ಇಸ್ಲಾವುದ್ದಿನ ಗದ್ಯಾಳ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಮುಶಿಗೇರಿ ಗ್ರಾಮದ ಜಾನುವಾರುಗಳಿಗೆ ಕುಡಿವ ನೀರಿಗಾಗಿ ನಿರ್ಮಿಸಿದ ಕೆರೆಗೆ ರೈತರ ಹೊಲಗಳಿಂದ ನೀರು ಹರಿದು ಬರಲು ಕೋಡಿ (ಮಣ್ಣಿನ ಕಾಲುವೆ)ಯನ್ನು ಮಾಡಲಾಗಿತ್ತು. ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ನೀರು ಕೆರೆಗೆ ಹೋಗದೇ ಕೋಡಿ ಬಿದ್ದ ಪರಿಣಾಮವಾಗಿ ನೀರು ಗ್ರಾಮದ ದಲಿತ ಕೇರಿಗೆ ನುಗ್ಗಿ 50ಕ್ಕೂ ಹೆಚ್ಚು ಮನೆಗಳಿಗೆ ಸಣ್ಣ ಪುಟ್ಟ ಹಾನಿಯುಂಟು ಮಾಡಿದ್ದು, ಎರಡು ಮನೆಗಳು ಸಂಪೂರ್ಣ ನೆಲ ಸಮವಾಗಿವೆ. ದಿಢೀರ್ನೆ ನೀರು ಮನೆಯೊಳಗೆ ನುಗ್ಗಿದ ಪರಿಣಾವಾಗಿ ಮನೆಯಲ್ಲಿನ ಸಾಮಗ್ರಿಗಳು ನೀರಲ್ಲಿಯೇ ತೇಲಾಡಿವೆ. ಕೆಲವರ ಮನೆಯಲ್ಲಿನ ಜೋಳದ ಚೀಲ, ಬಟ್ಟೆ, ಕೃಷಿ ಸಾಮಗ್ರಿಗಳು ಹಾನಿಗೊಳಗಾಗಿವೆ. ಸದ್ಯ ಬರಗಾಲವಿದ್ದರಿಂದ ದಿಢೀರ್ ಈ ರೀತಿಯಾಗಿದ್ದು ತೀವ್ರ ಆಘಾತವುಂಟುಮಾಡಿದೆ. ಪರಿಹಾರ ನೀಡಬೇಕು ಎಂದು ದಲಿತ ಕಾಲೋನಿ ನಿವಾಸಿಗಳು ಎಸಿ ಎದುರು ಅಳಲು ತೋಡಿಕೊಂಡರು.  
ವರದಿ ನೀಡಲು ಸೂಚನೆ
ಎಸಿ ಇಸ್ಲಾವುದ್ದಿನ ಗದ್ಯಾಳ ಗ್ರಾಮದ ಹಾನಿಗೊಳಗಾದ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ಈ ಕುರಿತು ಪ್ರತಿಯೊಂದು ಮನೆಯ ಸಂಪೂರ್ಣ ವಿವರ, ಹಾನಿಯಾದ ವಸ್ತುಗಳು ಸೇರಿದಂತೆ ಮುಂತಾದವುಗಳ ಕುರಿತು ಸಂಪೂರ್ಣ ವರದಿ ತಯಾರಿಸಿ ಕೂಡಲೇ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಹುಲಿಗೆವ್ವ ಮಾದರ ಮತ್ತು ಶಿವಪ್ಪ ಮಾದರಗೆ ಸೇರಿದ ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಈ ಕುಟುಂಬಗಳಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಹಿರಿಯರು, ಸಾರ್ವಜನಿಕರು ಹಾಜರಿದ್ದರು.

ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ
ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್ ಠಾಣೆಯ ಹತ್ತಿರದ ಕೃಷ್ಣಾಜಿ ಘೋರ್ಪಡೆಯವರ ಮನೆಯ ಹಿತ್ತಲಿನಲ್ಲಿನ ತೆಂಗಿನ ಮರಕ್ಕೆ ಮಂಗಳವಾರ ರಾತ್ರಿ ಸಿಡಿಲು ತೆಂಗಿನ ಮರಕ್ಕೆ ಬಡಿದಿದ್ದು, ಕೆಲ ಕಾಲ ಎಲ್ಲರಲ್ಲಿಯೂ ಆತಂಕಕ್ಕೆ ಕಾರಣವಾಯಿತು. ಸಿಡಿಲಿನ ರಭಸಕ್ಕೆ ತೆಂಗಿನ ಮರಕ್ಕೆ ಬೆಂಕಿತಗುಲಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಲಕ್ಷ್ಮೇಶ್ವರ ಸುತ್ತಮುತ್ತಲಿನ ಗೊಜನೂರ, ಬಟ್ಟೂರು, ಪು.ಬಡ್ನಿ, ಹುಲ್ಲೂರ, ಅಡರಕಟ್ಟಿ ಮುಂತಾದ ಕಡೆ ಉತ್ತಮ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement