ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ
ಗದಗ: ಜಿಲ್ಲಾಡಳಿತ ಭವನದಲ್ಲಿ ಮೇ 31ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರ ಆಯೋಜಿಸಲಾಗಿದೆ. ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಮದರ್ ಥೇರೆಸಾ ಮಹೇಶ್ವರಿ ಇನ್ಸ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಮಲ್ಲಸಮುದ್ರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್. ಆವಿನ ನೆರವೇರಿಸುವರು. ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಪಂ ಸಿಇಓ ವಿ.ಜಿ. ತುರಮರಿ, ಎಸ್ಪಿ ಡಾ.ಎಸ್.ಡಿ.ಶರಣಪ್ಪ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೊಸಮನಿ ಪುಂಡಲಿಕ, ಡಿಎಚ್ಓ ಡಾ.ಡಿ.ಬಿ.ಚನ್ನಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎನ್.ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ ಹಾಗೂ ಉಪನ್ಯಾಸಕರಾಗಿ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ವೈ.ಕೆ.ಭಜಂತ್ರಿ ಅವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಖರ್ಚು ವೆಚ್ಚಗಳ ವಿವರ ಸಲ್ಲಿಸಲು ಸೂಚನೆ
ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರಕ್ಕೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಖರ್ಚು ವೆಚ್ಚಗಳ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ಚುನಾವಣೆ ಲೆಕ್ಕ ಪತ್ರಗಳ ಅವಶ್ಯಕ ದಾಖಲೆಗಳೊಂದಿಗೆ ಫಲಿತಾಂಶ ಘೋಷಣೆಯಾದ 30 ದಿನಗಳೊಳಗಾಗಿ ಸಲ್ಲಿಸಬೇಕಾಗಿರುತ್ತದೆ. ಮೇ 8ರಿಂದ ಜೂನ್ 6 ರೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರಗಳನ್ನು ಅವಶ್ಯಕ ದಾಖಲೆಗಳ ಸಮೇತ ಸಲ್ಲಿಸಬೇಕಾಗುತ್ತದೆ. ಈ ಕುರಿತು ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ ಈಗಾಗಲೇ ಕಾರ್ಯಾಲಯದಿಂದ 14-5-2013ರಂದು ಅವಶ್ಯಕ ತಿಳಿವಳಿಕೆ ನೀಡಲಾಗಿದೆ. ಜಿಲ್ಲೆಯ 65-ಶಿರಹಟ್ಟಿ, 66-ಗದಗ, 67-ರೋಣ ಹಾಗೂ 68-ನರಗುಂದ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕ ಪತ್ರ, ಅವಶ್ಯಕ ದಾಖಲೆಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಅಕೌಟಿಂಗ್ ತಂಡ, ಸಹಾಯಕ ವೆಚ್ಚ ವೀಕ್ಷಕರಲ್ಲಿ ಪರಿಶೀಲಿಸಿಕೊಂಡು, ಗದಗ ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ ಅವರಿಗೆ ನಿಗದಿಪಡಿಸಿದ ದಿನಾಂಕದೊಳಗೆ ತಪ್ಪದೇ ಸಲ್ಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.