ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

Lingaraj Badiger
Updated On : 31 May 2013, 12:19 pm

ಕನ್ನಡಪ್ರಭ ವಾರ್ತೆ, ರೋಣ, ಮೇ 30
ಸ್ಥಳೀಯ ಪುರಸಭೆ 15 ದಿನಗಳಿಂದ ನೀರು ಪೂರೈಸಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ ಎಂದು ಪಟ್ಟಣದ 11ನೇ ವಾರ್ಡಿನ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗುರುವಾರ ಬೀದಿಗಿಳಿದು ಪ್ರತಿಭಟಿಸಿದರು.  
ಉದ್ದೇಶ ಪೂರ್ವಕ ವಿಳಂಬ: 11ನೇ ವಾರ್ಡಿನಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ನೂರಾರು ಸಮಸ್ಯೆಗಳ ಮಧ್ಯೆ ವಾರ್ಡ್ ಜನ ನರಳುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೇ ಉದ್ದೇಶಪೂರ್ವಕವಾಗಿ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತಿದೆ. 15 ದಿನಗಳಿಂದ ನಾನಾ ರೀತಿಯ ಕಾರಣಗಳನ್ನು ಹೇಳುತ್ತಾ ನೀರು ಪೂರೈಕೆ ಮಾಡಿರುವುದಿಲ್ಲ. ಇದಕ್ಕೆ ಪುರಸಭೆಯ ನೀರು ಸರಬರಾಜು ಸಿಬ್ಬಂದಿಯ ಮುಖ್ಯ ನಿಷ್ಕಾಳಜಿ ಕಾರಣ, ನೀರು ಸರಬರಾಜು ಸಿಬ್ಬಂದಿಯನ್ನು ಕೂಡಲೇ ಬದಲಿಸಬೇಕು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಿಹಿ ನೀರಿಲ್ಲ : ವಾರ್ಡಿನಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ 2 ಸಿಷ್ಟನ್ ಟ್ಯಾಂಕ್ (ಮಿನಿ ವಾಟರ್ ಸಪ್ಲಾಯ್) ಹೊರತುಪಡಿಸಿ ಸಾರ್ವಜನಿಕ ನಲ್ಲಿಗಳಿಲ್ಲ. ವಿದ್ಯುತ್ ಇದ್ದಾಗ ಕೆಲವೊಮ್ಮೆ ಮಾತ್ರ ನೀರು ಬಿಡುತ್ತಾರೆ. ಸಿಷ್ಟನ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹವಾಗದೇ ಇರುವುದರಿಂದ ನೇರವಾಗಿ ಪೈಪ್ ಮೂಲಕ ಮುಗಿಬಿದ್ದು ನೀರ ಪಡೆಯಬೇಕು. ಪೂರೈಕೆಯಾಗುವ ನೀರು ಸವುಳು ಮತ್ತು ಕುಡಿಯಲು ಯೋಗ್ಯವಾಗಿಲ್ಲ. ಪಟ್ಟಣದ ಇನ್ನುಳಿದ ಎಲ್ಲ ವಾರ್ಡಿಗೆ ಸಿಹಿ ನೀರು ಬಿಡುತ್ತಾರೆ. ಆದರೆ, ಇಲ್ಲಿ ಮಾತ್ರ ಸವುಳು ನೀರು ಬಿಡುತ್ತಾರೆ ಎನ್ನುವುದು ನಿವಾಸಿಗಳ ಆರೋಪವಾಗಿದೆ.  ದುಡಿಯಲು ಬೇರೆಡೆ ಹೋದ ಸಂದರ್ಭದಲ್ಲಿ ಯಾರೂ ಇಲ್ಲದಾಗ ನೀರು ಬಿಡುತ್ತಿದ್ದರು. ಈಚೆಗೆ ಅದನ್ನು ನಿಲ್ಲಿಸಿದ್ದಾರೆ. ಕೇಳಿದರೆ ನೀರು ಪೂರೈಕೆ ಸಿಬ್ಬಂದಿ ದಬಾಯಿಸುತ್ತಾರೆ. ನಾವೇನು ಮಾಡುವುದು ಹೋಗಿ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಕೇಳಿ ಎನ್ನುತ್ತಾರೆ. ಯಾರನ್ನು ಕೇಳಬೇಕು ಎನ್ನುವುದು ತಿಳಿಯದೇ ದಿನವಿಡಿ ಉದ್ಯೋಗ ಬಿಟ್ಟು ಎಲ್ಲೆಂದರಲ್ಲಿ ನೀರಿಗಾಗಿ ಅಲೆಯುವ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ನಿವಾಸಿಗಳಾದ ರಾಜಮಾ ಮುಗಳಿ, ಅಮೀನಬೀ ಕೌಜಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ್ ಹಾಗೂ 11ನೇ ವಾರ್ಡಿನ ಸದಸ್ಯ ಖಾದರಸಾಬ ಸಂಕನೂರ ಭೇಟಿ ನೀಡಿ, ನೀರು ಸರಬರಾಜು ಸಿಬ್ಬಂದಿ ಶಂಕ್ರಪ್ಪ ದೊಡ್ಡಣ್ಣವರನ್ನು ಸ್ಥಳಕ್ಕೆ ಕರೆಯಿಸಿದಾಗ ಅವರಿಂದ ಸಮರ್ಪಕ ಉತ್ತರ ಬಾರದೇ ಇರುವ ಹಿನ್ನೆಲೆಯಲ್ಲಿ ಐ.ಎಸ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿ, ನಿಮ್ಮ ಜವಾಬ್ದಾರಿ ಇಲ್ಲಿ ಬಹು ಮುಖ್ಯವಾಗಿದೆ.
ಇನ್ನೊಬ್ಬರ ಬಗ್ಗೆ ಬೆರಳು ತೋರಿಸದೇ ಕರ್ತವ್ಯ ಸರಿಯಾಗಿ ನಿಭಾಯಿಸಿ ಎಂದು ತರಾಟೆಗೆ ತೆಗೆದುಕೊಂಡರು. ಸಮರ್ಪಕವಾದ ರೀತಿಯಲ್ಲಿ ನೀರು ಪೂರೈಕೆ ಮಾಡುವಂತೆ ಸೂಚಿಸಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಖಾಸಿಮನಬಿ ಗೌಸೂರ, ಮಕ್ತುಮಬಿ ಇಟಗಿ, ರಾಜಮಾ ಮುಗಳಿ, ಅಮೀನಬೀ ಕೌಜಗೇರಿ, ನೀಲವ್ವ ಹಲಗಿ, ಬುಡ್ಡಿಮಾ ನದಾಫ, ರಫೀಕ ಕೋಲ್ಕಾರ, ದಾವಲಬಿ ಉಮಚಗಿ, ಜನ್ನತ್ತಬಿ ಅತ್ತಾರ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement