ನೀರಿಗಾಗಿ ಜನರ ಅಲೆದಾಟ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 30
ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚುವುದರೊಂದಿಗೆ ಜನ ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ.
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಿರಹಟ್ಟಿ ತಾಲೂಕಿನ ಜನತೆ ತಮ್ಮ ದೈನಂದಿನ ಬದುಕಿನಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿದ್ದು, ಸದ್ಯ ಕುಡಿಯುವ ನೀರಿನ ಸಮಸ್ಯೆ ಅವರನ್ನು ಬೆಂಬಿಡದೇ ಕಾಡುತ್ತಿದೆ.
ಶಿರಹಟ್ಟಿ ಪಟ್ಟಣದಲ್ಲಿ 8-10 ದಿನಕ್ಕೊಮ್ಮೆ ನಲ್ಲಿ ನೀರು ಬರುತ್ತಿದೆ. ವಿದ್ಯುತ್ ಕೈಕೊಟ್ಟರೆ ನೀರಿನ ಪಾಳಿ ಮತ್ತೆರಡು ದಿನ ಮುಂದಕ್ಕೆ ಹೋಗುವುದು ನಿಶ್ಚಿತ. ವಿದ್ಯಾ ನಗರ, ನವನಗರ, ಫಕೀರೇಶ್ವರ ನಗರ, ಕುರುಬರ ಓಣಿ, ಮ್ಯಾಗೇರಿ ಓಣಿ ಸೇರಿದಂತೆ ಮತ್ತಿತರೆಡೆ ನೀರಿನ ತೀವ್ರ ತೊಂದರೆಯಿದ್ದು, ಈ ಬಡಾವಣೆಗಳಲ್ಲಿ ಎಲ್ಲಿಯೂ ಕೊಳವೆ ಬಾವಿಗಳಿಲ್ಲ. ತೆರೆದ ಬಾವಿ ಇಲ್ಲವೇ ಇಲ್ಲ. ನಲ್ಲಿ ನೀರು ಸರಿಯಾದ ವೇಳೆಗೆ ಬರದಿದ್ದರೆ 1 ಕಿ.ಮೀ ದೂರದ ಫಕೀರೇಶ್ವದ ಮಠದ ಬಾವಿಗೆ ಹೋಗಿ ಕುಡಿಯಲು ನೀರು ತರುವ ಸ್ಥಿತಿ ಇದೆ ಎಂದು ರಮೇಶ ಮಲ್ಲಪ್ಪ ತುಳಿ ಹೇಳುತ್ತಾರೆ.
10 ದಿನಕ್ಕೊಮ್ಮೆ ನೀರು: ಪಟ್ಟಣದ ವಿಜಯ ನಗರ ಕಾಲೋನಿಯಲ್ಲಿಯೂ 10 ದಿನಕ್ಕೊಮ್ಮೆ ನೀರು ಬರುತ್ತಿದ್ದು, ಇಲ್ಲಿ ಹಾಕಿಸಲಾದ ಎರಡು ಕೊಳವೆ ಬಾವಿಗಳಲ್ಲಿ ಒಂದು ಕೆಟ್ಟು ಹೋಗಿದ್ದು, ಮುಖ್ಯಾಧಿಕಾರಿ ಡಾ. ಡಿ.ಟಿ. ದೊಡ್ಡಮನಿ ಅವರಿಗೆ ಅನೇಕ ಬಾರಿ ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಅಂತರ್ಜಲ ಕುಸಿತದಿಂದಾಗಿ ಇದ್ದ ಕೊಳವೆ ಬಾವಿಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಇದೇ ಬಡಾವಣೆಯ ಶಿವಲಿಂಗಪ್ಪ ಪ್ಲಾಟ್ನಲ್ಲಿಯ ಜನತೆ ಹನಿ ನೀರಿಗೂ ಪರದಾಡುತ್ತಿದ್ದಾರೆ. ಎಲ್ಲಿಯೂ ತೆರೆದ ಬಾವಿ ಇಲ್ಲದ ಕಾರಣ ಅಧಿಕಾರಿಗಳು ತುರ್ತಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಎರಡು ದಿನಗಳಿಗೊಮ್ಮೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಬಡಾವಣೆಯ ಜೆಡಿಎಸ್ ಮುಖಂಡ ಅಕ್ಬರ್ಸಾಬ್ ಯಾದಗಿರಿ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಹೇಗಾದರೂ ಮಾಡಿ ಜನರಿಗೆ ಕುಡಿಯುವ ನೀರು ಒದಗಿಸುವುದಾಗಿ ಹೇಳುತ್ತಿದೆ. ಆದರೂ ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳ ತಾಂಡಾಗಳಲ್ಲಿ ನೀರಿನ ಬವಣೆ ತಪ್ಪಿಲ್ಲ. ಜನ ಕೊಡಗಳನ್ನು ಹಿಡಿದುಕೊಂಡು ದೂರದ ಪ್ರದೇಶಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ನೀರು ದೊರೆತರೂ ನೀರಿನ ಮೋಟಾರ್ ಸುಟ್ಟು ಹೋಗಿವೆ. ಮೋಟಾರ್ ಇದ್ದರೂ ವಿದ್ಯುತ್ ಸರಿಯಾಗಿ ಬರದಿದ್ದರಿಂದ ಸಮಸ್ಯೆ ಉದ್ಭವವಾಗಿದೆ ಎಂಬ ಸಿದ್ಧ ಉತ್ತರ ನೀರು ಸರಬರಾಜುಗಾರರಿಂದ ದೊರೆಯತ್ತದೆ.
ಯೋಜನೆ ನೆನೆಗುದಿಗೆ: ತಾಲೂಕಿನ ಹೊಳೆ-ಇಟಗಿ ಗ್ರಾಮದ ತುಂಗಭದ್ರಾ ನದಿಯಿಂದ ಬೆಳ್ಳಟ್ಟಿ, ಶಿರಹಟ್ಟಿ ಮಾರ್ಗವಾಗಿ ಗದಗ ತಾಲೂಕಿನ ಮುಳಗುಂದ ಗ್ರಾಮ ಸೇರಿದಂತೆ ಮಾರ್ಗ ಮಧ್ಯದಲ್ಲಿ ಬರುವ ಸುಮಾರು 10 ಹಳ್ಳಿಗಳಿಗೆ ಅಂದಾಜು 48 ಕಿಮೀವರೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಕರ್ನಾಟಕ ನೀರು ಸರಬರಾಜು ಮತ್ತು ಜಲಮಂಡಳಿ ನಿಗಮ ಕೈಗೆತ್ತಿಕೊಂಡಿರುವ ಕಾಮಗಾರಿಗೆ 2009ರಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದು, 4-5 ವರ್ಷ ಗತಿಸಿದರೂ ಕಾಮಗಾರಿ ಅಪೂರ್ಣಗೊಂಡಿದೆ. ಪ್ರತಿ ಹಂತದಲ್ಲಿಯೂ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಯೋಜನೆಯಂತೆ ಕಾಮಗಾರಿ ನಡೆಯದಿರುವುದೇ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಿದೆ.
ಒಟ್ಟಿನಲ್ಲಿ ತಾಲೂಕಿನ ಜನ ನೀರಿಗಾಗಿ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಸಮಸ್ಯೆಗಳತ್ತ ಗಮನಹರಿಸಿ ಪರಿಹರಿಸಬೇಕಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬೇಕೆಂಬುದು ಜನರ ಆಶಯವಾಗಿದೆ.
- ಮಹದೇವಪ್ಪ ಎಂ. ಸ್ವಾಮಿ