ರೈತರಲ್ಲಿ ಮಂದಹಾಸ ಮೂಡಿಸಿದ ಮಳೆ
ಕನ್ನಡಪ್ರಭ ವಾರ್ತೆ, ಗದಗ, ಮೇ 30
ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಪ್ರಾರಂಭವಾಗಿರುವ ರೋಹಿಣಿ ಮಳೆಯು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ.
ನರಗುಂದ ತಾಲೂಕನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ತಾಲೂಕುಗಳಲ್ಲಿನ ರೈತರು ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮು ರೈತರ ಆರ್ಥಿಕತೆಗೆ ಬೆನ್ನೆಲುಬು, ಅದರಲ್ಲಿಯೂ ರೋಹಿಣಿ ಮಳೆಯೇ ಹೆಚ್ಚು ಸೂಕ್ತ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಸೂಕ್ತ ಸಮಯಕ್ಕೆ ರೋಹಿಣಿ ಮಳೆಯಾಗದೇ ರೈತರು ಕಂಗಾಲಾಗಿದ್ದರು. ಮುಂಗಾರು ಬಿತ್ತನೆಗೆ ಈ ಮಳೆಯೇ ಸೂಕ್ತವಾಗಿದೆ. ಈ ಮಳೆಯಾಗಿ ಬಿತ್ತನೆಯಾದ ಹೆಸರು, ಶೇಂಗಾ ಹಾಗೂ ಇನ್ನಿತರ ಬೆಳೆಗಳಿಗೆ ಹೆಚ್ಚಿನ ರೋಗಬಾಧೆ ಕಾಡುವುದಿಲ್ಲ ಹಾಗೂ ಮುಂದಿನ ಮಳೆಗಳು ಸಕಾಲದಲ್ಲಿ ಸುರಿದಲ್ಲಿ ಅತ್ಯುತ್ತಮ ಫಸಲು ಬರುತ್ತದೆ ಎನ್ನುವುದು ಕೃಷಿಕರ ಅನುಭವದ ಮಾತಾಗಿದೆ.
ಬಿತ್ತನೆಗೆ ಸಿದ್ಧತೆ: ಕಳೆದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಹೊಲಗಳನ್ನು ರೈತರು ಈಗಾಗಲೇ 2 ಬಾರಿ ಹರಗಿ ಸಿದ್ಧಗೊಳಿಸಿ, ಉತ್ತಮ ಮಳೆಗಾಗಿ ಕಾಯುತ್ತಿದ್ದರು, ಅದರಲ್ಲಿಯೂ ಜೋಳ, ಗೋದಿ, ಕಡಲೆ ಬಿತ್ತನೆ ಮಾಡಿದ್ದ ಎಲ್ಲ ಹೊಲಗಳು ಸಿದ್ಧಗೊಂಡಿವೆ. ಇನ್ನು ಹತ್ತಿ ಬಿತ್ತನೆ ಮಾಡಿದ್ದ ರೈತರು ಆಳವಾಗಿ (ನೇಗಿಲು ಹೊಡೆಯುವುದು) ಉಳುಮೆ ಮಾಡಿದ್ದು, ಅವರು ಮಾತ್ರ ಮತ್ತೊಮ್ಮೆ ಭೂಮಿಯನ್ನು ಹರಗಿ ಸಿದ್ಧ ಮಾಡಬೇಕಿದೆ. ಇದನ್ನು ಹೊರತು ಪಡಿಸಿದಲ್ಲಿ ಇನ್ನುಳಿದ ಜಮೀನುಗಳು ಈಗಾಗಲೇ ಬಿತ್ತನೆಗೆ ಸಿದ್ಧಗೊಂಡಿವೆ.
ನಿರೀಕ್ಷಿತ ಬಿತ್ತನೆ ವಿವಿರ: ಜಿಲ್ಲೆಯಲ್ಲಿ ಈ ಬಾರಿ 2 ಲಕ್ಷ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ. ಇದರಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ಶೇಂಗಾ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಮೆಣಸಿನಕಾಯಿ 24 ಸಾವಿರ ಹೇ.ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಇನ್ನುಳಿದ ಪ್ರದೇಶದಲ್ಲಿ ತೊಗರಿ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಸಾಸಿವೆ, ಕಬ್ಬು ಬೆಳೆಯಲಾಗುತ್ತದೆ ಎಂದು ಈಗಾಗಲೇ ಕೃಷಿ ಇಲಾಖೆ ಅಂದಾಜಿಸಿದೆ.
ರೈತರಿಗೆ ಗೊಬ್ಬರದ್ದೇ ಚಿಂತೆ: ಗದಗ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ಈರುಳ್ಳಿ ಹಾಗೂ ಮೆಣಸಿನಕಾಯಿ. ಈರುಳ್ಳಿ ಬಿತ್ತನೆ ಮಾಡುವ ರೈತರು ವರ್ಷಪೂರ್ತಿ ಬೆಳೆಗೆ ಅಗತ್ಯ ಪೋಷಕಾಂಶಗಳನ್ನು ನೀಡುವಂತಹ ಡಿಎಪಿ ಗೊಬ್ಬರವನ್ನೇ ಹೆಚ್ಚು ಬಳಸುತ್ತಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ರೈತರಿಗೆ ಡಿಎಪಿ ಗೊಬ್ಬರದ್ದೇ ಸಮಸ್ಯೆಯಾಗಿದೆ. ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ ಜಿಲ್ಲೆಯಲ್ಲಿ ಲಭ್ಯವಾಗದೇ ರೈತರು 2009ರಲ್ಲಿ ಪಕ್ಕದ ಜಿಲ್ಲೆಯಿಂದ ಖರೀದಿಸಿ ತಂದಿದ್ದರು. ಈ ಬಾರಿಯಾದರೂ ಕೃಷಿ ಇಲಾಖೆ ಜಿಲ್ಲೆಯಾದ್ಯಂತ ಸೂಕ್ತ ರೀತಿಯಲ್ಲಿ ಗೊಬ್ಬರ ದಾಸ್ತಾನು ಹಾಗೂ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕಿದೆ.
ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಮಳೆ ಆಶಾದಾಯಕ ವಾತಾವರಣ ನಿರ್ಮಿಸಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ರೈತರಿಗೆ ಬೇಕಾಗುವ ಬೀಜ ಮತ್ತು ಗೊಬ್ಬರ ದಾಸ್ತಾನು ಹಾಗೂ ಅವುಗಳ ಸಮರ್ಪಕ ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸಕಾಲಕ್ಕೆ ಅವುಗಳ ಪರಿಶೀಲನೆ ನಡೆಸುವಂತೆ ತಾಲೂಕು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 4215 ಟನ್ ವಿವಿಧ ಬೀಜಗಳು ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಟ ಎನ್.ವಿ. ನರಸಿಂಹಮೂರ್ತಿ
ಜಂಟಿ ನಿರ್ದೇಶಕ, ಕೃಷಿ ಇಲಾಖೆ ಗದಗ
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಸದ್ಯ ನಾವೆಲ್ಲ ಹೆಸರು ಮತ್ತು ಶೇಂಗಾ ಬಿತ್ತನೆ ಮಾಡುತ್ತೇವೆ. ಒಮ್ಮೆಲೆ ಗೊಬ್ಬರಕ್ಕೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಈರುಳ್ಳಿ ಬಿತ್ತನೆಯ ಸಂದರ್ಭದಲ್ಲಿ ಸಹಜವಾಗಿ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಅದರ ಪೂರ್ವದಲ್ಲಿಯೇ ಕೃಷಿ ಇಲಾಖೆ ರೈತರಿಗೆ ಸುಲಭವಾಗಿ ಗೊಬ್ಬರ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು.
-ಪಾಂಡಪ್ಪ ಜಾಧವ, ಮಾರೆಪ್ಪ ಕಬಲಾಯತಕಟ್ಟಿ, ನಿಂಗಪ್ಪ ಕಳಕಾಪುರ
(ವಿವಿಧ ತಾಲೂಕಿನ ರೈತರು)
-ಶಿವಕುಮಾರ ಕುಷ್ಟಗಿ