ಲಕ್ಷ್ಮೇಶ್ವರದಲ್ಲೂ ನೀರಿಗೆ ಬರ
-ಅಶೋಕ ಸೊರಟೂರ
ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಪಟ್ಟಣವೆಂಬ ಹೆಗ್ಗಳಿಕೆ ಹೊಂದಿರುವ ಲಕ್ಷ್ಮೇಶ್ವರ ಪಟ್ಟಣವು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದೆ.
ಸುಮಾರು 45 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಬೇಸಿಗೆಯ ಈ ದಿನಗಳಲ್ಲಿ ನೀರಿನ ತೊಂದರೆ ಎದುರಾಗಿದೆ.
ಪಟ್ಟಣದ ಜನತೆ ಕುಡಿಯುವ ನೀರಿಗಾಗಿ 10-15 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಜನರು ನೀರಿಗಾಗಿ ಕೊಡಗಳನ್ನು ಹಿಡಿದು ಅಲೆಯುತ್ತಿರುವುದನ್ನು ನೋಡಿಯೂ ನೋಡದಂತಿರುವ ಪುರಸಭೆಯ ಅಧಿಕಾರಿಗಳು ತಮಗೇಕೆ ಆ ಉಸಾಬರಿ ಎಂದು ಕೈಕಟ್ಟಿ ಕುಳಿತಂತೆ ಕಾಣುತ್ತಿದೆ. ಅಲ್ಲದೆ ಸದ್ಯ ಆಡಳಿತ ಮಂಡಳಿಯು ಇಲ್ಲವಾಗಿದ್ದು, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸಲು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವಧಿಯಲ್ಲಿ ಪ್ರಾರಂಭಗೊಂಡ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯು ಪಟ್ಟಣದ ಬಹುದಿನಗಳ ನೀರಿನ ಬವಣೆಯನ್ನು ನೀಗಿಸಿತ್ತು. ಹಾವೇರಿ ಜಿಲ್ಲೆಯ ಮೇವುಂಡಿ ಹತ್ತಿರ ಜಾಕ್ವೆಲ್ ನಿರ್ಮಿಸಿ ತುಂಗಭದ್ರಾ ನದಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರನ್ನು ಪೂರೈಸುವ ಯೋಜನೆ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಭವಣೆಯನ್ನು ಪರಿಹರಿಸಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗುವ ಹಂತ ತಲುಪಿದೆ. ಕುಡಿಯುವ ನೀರಿನ ಯೋಜನೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಪಟ್ಟಣಕ್ಕೆ 2-3 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಜನತೆಗೆ ಕೊಡಬಹುದಾಗಿತ್ತು. ಆದರೆ, ಈಗ ಪಟ್ಟಣದ ಜನತೆಗೆ 12-15 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಮೇವುಂಡಿ ಹತ್ತಿರದ ಜಾಕ್ವೆಲ್ನ ಹತ್ತಿರ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ನದಿಯಲ್ಲಿ ಹರಿಯುತ್ತಿರುವ ನೀರಿನ ಹರಿವು ಬೇರೆಡೆ ತಿರುಗಿ ಜಾಕ್ವೆಲ್ನ ಮೋಟಾರ್ಗಳಿಗೆ ನೀರು ದೊರಕದೆ ಮೋಟಾರ್ಗಳು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ತಡೆಯುವಲ್ಲಿ ಪುರಸಭೆಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸತೀಶ ಮೆಕ್ಕಿ ಆರೋಪಿಸಿದ್ದಾರೆ.
ದುರಸ್ತಿಗೆ ಲಕ್ಷಾಂತರ ಹಣ ಖರ್ಚು: ಪಟ್ಟಣಕ್ಕೆ ನೀರು ಪೂರೈಸುವ ಪೈಪ್ಗಳು ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಾಲೆಹೊಸೂರು ಸೂರಣಗಿ ಮುಂತಾದೆಡೆ ರೈತರು ತಮ್ಮ ಹೊಲಗಳಲ್ಲಿ ಹಾಯ್ದು ಹೋಗಿರುವ ಕುಡಿಯುವ ನೀರಿನ ಪೈಪ್ನ್ನು ಒಡೆದು ಹೊಲಗಳಿಗೆ ನೀರನ್ನು ಹಾಯಿಸಿ ನೀರಾವರಿಯನ್ನು ಮಾಡಿಕೊಂಡಿದ್ದು ಕಂಡು ಬರುತ್ತಿದೆ. ಇದರ ಬಗ್ಗೆ ಪುರಸಭೆಯು ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಏರ್ವಾಲ್ವ್ಗಳಿಗಾಗಿ ನಿರ್ಮಿಸಿದ ಚೆಂಬರ್ಗಳು ಒಡೆದು ಹೋಗಿವೆ. ಇದಲ್ಲದೆ ಹತ್ತಾರು ಕಡೆಗಳಲ್ಲಿ ಏರ್ವಾಲ್ವ್ಗಳ ಮುಖಾಂತರ ನೀರು ಸೋರಿ ಹೋಗುತ್ತಿದ್ದರೂ ಕೇವಲ ಕಾಟಾಚಾರಕ್ಕೆ ಎಂಬಂತೆ ದುರಸ್ತಿ ಕಾರ್ಯ ಮಾಡುತ್ತಿದ್ದು. ಲಕ್ಷಾಂತರ ಹಣ ದುರಸ್ತಿಗೆಂದು ಖರ್ಚು ಹಾಕಿ ಗುಳುಂ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಶುದ್ಧೀಕರಣ ಘಟಕದಲ್ಲಿ ಸಮಸ್ಯೆ: ಸೂರಣಗಿ ಹತ್ತಿರ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕದಲ್ಲಿ ನೂರೆಂಟು ಸಮಸ್ಯೆಗಳಿವೆ. ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಮುಖ್ಯ ವಿದ್ಯುತ್ ಮೋಟಾರ್ ಸುಟ್ಟು ಹಲವು ತಿಂಗಳು ಕಳೆದಿದ್ದರೂ ಅದನ್ನು ದುರಸ್ತಿ ಮಾಡಿಸಿಲ್ಲ.
ಪ್ಲೋರೈಡ್ಯುಕ್ತ ನೀರು: ಲಕ್ಷ್ಮೇಶ್ವರ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಾದ ಬಟ್ಟೂರು, ಗೊಜನೂರು, ಸೂರಣಗಿ, ದೊಡ್ಡೂರ, ಪುಟಗಾಂವ್ ಬಡ್ನಿ, ಅಕ್ಕಿಗುಂದ, ಬಸಾಪುರ, ಕುಂದ್ರಳ್ಳಿ, ಅಡರಕಟ್ಟಿ, ಮಲ್ಲಾಪುರ, ಅಮರಾಪುರ, ಸೋಗಿಹಾಳ, ಹುಲ್ಲೂರು, ಶಿಗ್ಲಿ, ಬೂದಿಹಾಳ, ಕೊಕ್ಕರಗುಂದಿ, ಆದ್ರಳ್ಳಿ ಗ್ರಾಮಗಳಲ್ಲಿ ಅತ್ಯಧಿಕ ಪ್ಲೋರೈಡ್ಯುಕ್ತ ನೀರು ಇದೆ. ಇಂತಹ ನೀರನ್ನು ಕುಡಿಯುವುದರಿಂದ ಹಲ್ಲುಗಳು ಬೇಗನೆ ಹಾಳಾಗಿ ಹೋಗುವುದು, ಅಕಾಲ ಮುಪ್ಪು ಆವರಿಸುವುದು. ಬೆನ್ನು ಬಾಗುವುದು, ಮೊಣಕಾಲ ಸಂದು, ಕೀಲುಗಳಲ್ಲಿ ಗಂಟು ಕಟ್ಟಿದಂತಹ ಅನುಭವವಾಗಿ ಎಲುಬಿನ ಸವಕಳಿಯುಂಟಾಗಿ ಎಲುವುಗಳು ಬೇಗನೆ ಹಾಳಾಗಿ ಹೋಗುತ್ತವೆ. ಇದಕ್ಕೆಲ್ಲ ಪ್ರಮುಖ ಕಾರಣ ಪ್ಲೋರೈಡ್ಯುಕ್ತ ನೀರು ಎಂಬುದರಲ್ಲಿ ಎರಡು ಮಾತಿಲ್ಲ.
ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆ ಕಾಡುತ್ತಿದೆ. ಅಲ್ಲದೆ ಹಾವೇರಿಯಿಂದ ಮೇವುಂಡಿ ಜಾಕ್ವೆಲ್ಗೆ ನಿರಂತರ ವಿದ್ಯುತ್ ಪೂರೈಸುವ ಎಕ್ಸಪ್ರೆಸ್ ಲೈನ್ ಹಾಕಿದ್ದರೂ ಆ ಲೈನ್ಗಳಿಂದ ರೈತರು ಪಂಪ್ಸೆಟ್ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಹೀಗಾಗಿ ವಿದ್ಯುತ್ ಸಮಸ್ಯೆಯುಂಟಾಗಿ ನೀರು ಪೂರೈಕೆಯಲ್ಲಿ ಪ್ರಮುಖ ಸಮಸ್ಯೆಯಾಗಿದೆ.
-ವಿ.ಬಿ. ಬೂದಿಹಾಳ
(ಪುರಸಭೆ ಮುಖ್ಯಾಧಿಕಾರಿ)