ಗುಲ್ಬರ್ಗದಲ್ಲಿ ಭಾರತೀಯ ಸೇನಾ ಭರ್ತಿ ರ್ಯಾಲಿ
ಗದಗ: ಗುಲ್ಬರ್ಗದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜೂನ್ 6ರಿಂದ 13ರ ವರೆಗೆ ಭಾರತೀಯ ಸೇನಾ ಭರ್ತಿ ರ್ಯಾಲಿ ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಪಿಯುಸಿ ಸೈನ್ಸ್‌ನಲ್ಲಿ ಕನಿಷ್ಠ ಶೇ. 50ರಷ್ಟು ಅಂಕಪಡೆದವರಿಗೆ ಸೋಲ್ಜರ್ ಟೆಕ್, ನರ್ಸಿಂಗ್ ಹಾಗೂ ಸೋಲ್ಜರ್ ಕ್ಲರ್ಕ್ ಮುಂತಾದ ಹುದ್ದೆಗಳಿಗೆ ದೈಹಿಕ ಅರ್ಹತೆ, ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ಭರ್ತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ 1 ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ಜೂನ್ 12ರಂದು ಆಯ್ಕೆಗೆ ಹಾಜರಾಗಬೇಕು. ಅಭ್ಯರ್ಥಿಯು 17ರಿಂದ 23 ವರ್ಷದೊಳಗಿನವರಾಗಿದ್ದು, 166 ಸೆಂ.ಮೀ. ಎತ್ತರ, 77-82 ಎದೆ ಸುತ್ತಳತೆ ಹಾಗೂ 50 ಕೆ.ಜಿ. ತೂಕದವರಾಗಿರಬೇಕು. ಹುದ್ದೆಯ ಅರ್ಹತೆಗೆ ತಕ್ಕಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮೂಲ ಅಂಕಪಟ್ಟಿ, 15 ಭಾವಚಿತ್ರಗಳು, ಕಾಯಂ ರಹವಾಸಿ, ಗುಣನಡತೆ, ಜಾತಿ ಹಾಗೂ ಆದಾಯ ಮತ್ತು ಎನ್.ಸಿ.ಸಿ. ಪ್ರಮಾಣಗಳು ಹಾಗೂ ಅಭ್ಯರ್ಥಿಯು 18 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಪಾಲಕರಿಂದ ಪ್ರಮಾಣಪತ್ರ, ಸರ್ಕಾರದ ಅಥವಾ ಇನ್ನಿತರ ಸಂಸ್ಥೆಯಿಂದ ಪಡೆದ ಕ್ರೀಡಾ ಪ್ರಮಾಣಪತ್ರಗಳ 2 ಪ್ರತಿಗಳನ್ನು (ಪ್ರಮಾಣ ಪತ್ರಗಳು ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಇರಬೇಕು) ಸಲ್ಲಿಸಬೇಕೆಂದು ಸೇನಾ ಆಯ್ಕೆ ರ್ಯಾಲಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈನುಗಾರಿಕೆ ತರಬೇತಿ
ಗದಗ: ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗೋದಿ ಸಂಶೋಧನಾ ಕೇಂದ್ರದ ಹಿಂಭಾಗ, ಕೃಷಿ ವಿಶ್ವ ವಿದ್ಯಾಲಯ ಆವರಣ, ಧಾರವಾಡದಲ್ಲಿ ನಿಯಮಿತವಾಗಿ ರೈತ ಹಾಗೂ ರೈತ-ಮಹಿಳೆಯರಿಗಾಗಿ ಹೈನುಗಾರಿಕೆ ತರಬೇತಿಗಳನ್ನು ಕೈಗೊಳ್ಳುತ್ತಿದೆ. ಜೂನ್ 10ರಿಂದ 15ರ ವರೆಗೆ ರೈತ, ರೈತ ಮಹಿಳೆಯರಿಗಾಗಿ 6 ದಿನಗಳ ಹೈನುಗಾರಿಕೆ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯಬಹುದು. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ತಪ್ಪದೇ ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಲು ಧಾರವಾಡದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗದಗ: ಲಲಿತಾ ಕಲಾ ಪದವಿ ಪಡೆಯುವ ಆಸಕ್ತಿಯಿರುವ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಬಿಎಫ್‌ಎ ಫೈನ್ ಆರ್ಟ್ ತರಗತಿಯ ಪ್ರವೇಶಕ್ಕಾಗಿ ನಗರದ ವಿಜಯ ಲಲಿತಕಲಾ ಕಾಲೇಜು ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಜೂನ್ 15 ರೊಳಗಾಗಿ ಅಂಚೆಯ ಮೂಲಕ ಇಲ್ಲವೆ ಖುದ್ದಾಗಿ ಬಂದು ಅರ್ಜಿಗಳನ್ನು ತೆಗೆದುಕೊಂಡು ಪ್ರವೇಶ ಪಡೆಯಬಹುದಾಗಿದೆ.