ಜನರ ತೊಂದರೆ ನಿವಾರಣೆಗಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಮೇ 31
ಪಡಿತರ ಚೀಟಿ ಪಡೆಯಲು ಸರ್ಕಾರ ನಿಗದಿಪಡಿಸಿದ ನಿಯಮಾವಳಿಗಳು ಸಂವಿಧಾನದ ಆಶಯ ಈಡೇರಿಕೆಗೆ ಮಾರಕವಾಗಿವೆ ಎಂದು ಜಿಲ್ಲಾ ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಶುಕ್ರವಾರ ಪಡಿತರ ಚೀಟಿ ಪಡೆಯುವಲ್ಲಿ ಸಾರ್ವಜನಿಕರು ಪಡುತ್ತಿರುವ ತೊಂದರೆ ನಿವಾರಿಸುವ ಕುರಿತು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಸರ್ಕಾರ ಪಡಿತರ ಚೀಟಿ ಪಡೆಯಲು ರೂಪಿಸಿದ ಅವೈಜ್ಞಾನಿಕ ನಿಯಮಾವಳಿಗಳು ಬಡವರು, ಹಿಂದುಳಿದವರ ಪಾಲಿಗೆ ಅಡೆತಡೆಗಳಾಗಿ ಪರಿಣಮಿಸಿವೆ. ಪಡಿತರ ಚೀಟಿ ಪಡೆಯಲು ಹರಸಾಹಸ ಪಡುವ ಸ್ಥಿತಿ ಸಾಮಾನ್ಯ ಜನರದ್ದಾಗಿದೆ. ದಿನಗೂಲಿ ಮೇಲೆ ಜೀವನ ಸಾಗಿಸುತ್ತಿರುವ ಬಡವರು ಫೋಟೋ ಮತ್ತಿತರ ಕಾರ್ಯಗಳಿಗಾಗಿ ಇಂಟರ್‌ನೆಟ್ ಸೆಂಟರ್ ಮುಂದೆ ರಾತ್ರಿ 2 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ದಯನೀಯವಾಗಿದ್ದು, ಕೆಲ ಕೇಂದ್ರಗಳಲ್ಲಿ ಪ್ರತಿದಿನ 30 ರಿಂದ 50 ಜನರಿಗೆ ಮಾತ್ರ ಅವಕಾಶ ದೊರೆಯುತ್ತಿದ್ದು, ಇನ್ನುಳಿದವರು ನಿರಾಶಾದಾಯಕವಾಗಿ ವಾಪಾಸ್ಸಾಗುವ ದುಸ್ಥಿತಿ ನಿರ್ಮಾಣವಾಗಿದೆ. ಕೆಲ ಇಂಟರ್‌ನೆಟ್ ಸೆಂಟರ್‌ಗಳಲ್ಲಿ ವ್ಯಾಪಕವಾಗಿ ವಂಚನೆ ನಡೆಯುತ್ತಿದ್ದು, ಪ್ರತಿಯೊಬ್ಬರಿಂದ ರು. 50 ದರ ನಿಗದಿಮಾಡಿದ್ದು, ಆದರೆ ಈ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ (ಬೇಕಾಬಿಟ್ಟಿಯಾಗಿ) ವಂಚನೆ ನಡೆಯುತ್ತಿದೆ ಎಂದು ಆರೋಪಿಸಿದರು. ಗದಗ-ಬೆಟಗೇರಿ ಅವಳಿ ನಗರದಲ್ಲಿನ ಪ್ರತಿ ವಿಭಾಗದಲ್ಲಿಯೂ ಪ್ರತ್ಯೇಕ ಕೇಂದ್ರಗಳನ್ನು ತೆರೆಯುವುದು ಮತ್ತು ಬಯೋವುಟ್ರಿಕ್ ಗುರುತು ಪಡೆಯುವಾಗ ಈಗಾಗಲೇ ಕಾರ್ಡ್ ಹೊಂದಿದವರಿಂದ ಗುರುತು ಪ್ರಮಾಣ ಮಾಡಿಸುವಂತೆ ರೂಪಿಸಿದ ನಿಯಮಾವಳಿಯನ್ನು ಕೈ ಬಿಟ್ಟು ನಿಯಮಾವಳಿಯನ್ನು ಸರಳೀಕರಿಸಬೇಕೆಂದು ಆಗ್ರಹಿಸಿದ್ದಾಗಿ ತಿಳಿಸಿದರು. ಈ ಕುರಿತು ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಿಂದ ಪ್ರತಿಭಟನೆ ಪ್ರಾರಂಭಿಸಿ ನಗರದ ಮಹೇಂದ್ರಕರ ವೃತ್ತ, ಸ್ಟೇಷನ್ ರೋಡ್, ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘದ ಕಾರ್ಯದರ್ಶಿ ಮುತ್ತಣ್ಣ ಬರಡಿ, ನಾಗೇಶ್ವರ ಮಿತ್ರ ಮಂಡಳಿಯ ಅಧ್ಯಕ್ಷ ವಿಶ್ವನಾಥ ಅಂಗಡಿ, ನಾಗಲಿಂಗ ನಗರ ವಿವಿಧೋದ್ದೇಶಗಳ ಸಂಘ ಹಾಗೂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಕಲಬುರ್ಗಿ, ಶ್ರೀರಾಮ ಸೇನೆಯ ಕಾರ್ಯದರ್ಶಿ ಮಹೇಶ ರೋಖಡೆ, ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ರವಿ ಮಡಿವಾಳರ, ಕಾಶಪ್ಪ ಬೆಟಗೇರಿ, ಮಂಜು ವಾಲ್ಮೀಕಿ, ಬರಮಲಿಂಗಪ್ಪ ಬಿಂಗಿ, ಜಯಮ್ಮ ಮುನವಳ್ಳಿ, ರವಿಕಿರಣ ಪುಣೇಕರ ಪಾಲ್ಗೊಂಡಿದ್ದರು.