ದುಶ್ಚಟ ತ್ಯಜಿಸಿ ಆರೋಗ್ಯವಂತರಾಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 31
ಉತ್ತಮ ಆರೋಗ್ಯ ಹೊಂದಬೇಕಾದಲ್ಲಿ ತಂಬಾಕು, ಗುಟಕಾ ಸೇವನೆಯನ್ನು ಜನರು ತ್ಯಜಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ಕುಮಾರ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಮದರ್ ಥೆರೇಸಾ, ಮಹೇಶ್ವರಿ, ಇನ್ಸ್ಟ್ಯೂಟ್ ಆಫ್ ನರ್ಸಿಂಗ್ ಗದಗ, ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಮಲ್ಲಸಮುದ್ರ ಇವರ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧೂಮಪಾನ ದುಶ್ಚಟವಾಗಿದೆ. ಇದಕ್ಕೆ ಯುವಕ, ಯುವತಿಯರೇ ಹೆಚ್ಚು ಬಲಿಯಾಗುತ್ತಿರುವುದು ನೋವಿನ ಸಂಗತಿ. ಸಿಗರೇಟಿನಲ್ಲಿ 4 ಸಾವಿರ ವಿಷಪದಾರ್ಥಗಳಿವೆ. ಇವುಗಳಲ್ಲಿ 400ಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರ್ ಉಂಟುಮಾಡುವಂತಹ ಕಾರ್ಸಿನೋಜೆನಿಕ್ ಪದಾರ್ಥವನ್ನು ಹೊಂದಿದೆ. ಈ ವಿಷಪದಾರ್ಥಗಳು ಸಿಗರೇಟ್ ಸೇದಿದ 10 ಸೆಕೆಂಡ್ಗಳಲ್ಲಿ ಮೆದುಳಿಗೆ ಸೇರುತ್ತದೆ. 13 ಸೆಕೆಂಡ್ಗಳಲ್ಲಿ ಇಡೀ ದೇಹವನ್ನು ಆವರಿಸುತ್ತದೆ. ಅಂದರೆ ಧೂಮಪಾನ ಮಾಡಿದ ವ್ಯಕ್ತಿ ದೇಹಕ್ಕೆ 4 ಸಾವಿರ ವಿಷ ಪದಾರ್ಥಗಳನ್ನು ಪಂಪ್ ಮಾಡಿಕೊಂಡಂತೆ ಎಂದರು.
ಸಿಗರೇಟ್ನ ಉದ್ದ ಸುಮಾರು 5 ಸೆಂ.ಮೀ.ನಷ್ಟಿರುತ್ತದೆ. ಸಿಗರೇಟ್ ಸೇವನೆ ಮಾಡುವ ವ್ಯಕ್ತಿಯ ಆಯಷ್ಯದಲ್ಲಿ 5 ನಿಮಿಷದ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿನ ಜನರು ವರ್ಷದಲ್ಲಿ ರು. 900 ಕೋಟಿಗಳಷ್ಟು ಸಿಗರೇಟ ಸೇದುತ್ತಾರೆ. ಪ್ರಪಂಚದಲ್ಲಿ ಪ್ರತಿ 8 ಸೆಕೆಂಡ್ಗೆ ಒಬ್ಬ ವ್ಯಕ್ತಿ ಸಿಗರೇಟ್ ಸೇವನೆಯಿಂದ ಸಾವನ್ನಪ್ಪುತ್ತಿದ್ದಾನೆ. ಸಿಗರೇಟ್ ಸೇದಿ ಹೊರಗೆ ಬಿಟ್ಟ ಹೊಗೆಯಿಂದ ಪ್ರಪಂಚದಲ್ಲಿ 15 ಕೋಟಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ವಿಶ್ವದಾದ್ಯಂತ ಶೇ. 50ರಷ್ಟು ಪುರುಷರು, ಶೇ. 10ರಷ್ಟು ಮಹಿಳೆಯರು ಧೂಮಪಾನ ಮಾಡುತ್ತಾರೆ.
ಭಾರತದಲ್ಲಿ ಪ್ರತಿವರ್ಷ 2 ಕೋಟಿ ವಯಸ್ಕರು, 55 ಸಾವಿರ ಮಕ್ಕಳು ಸಿಗರೇಟು ಸೇದುವುದನ್ನು ಕಲಿಯುತ್ತಿದ್ದಾರೆ. ಸಿಗರೇಟು ಹಾಗೂ ಬೀಡಿ ತಯಾರಿಸುವ ಕಂಪನಿಗಳಿಂದ ಸರ್ಕಾರಕ್ಕೆ ರು. 5550 ಕೋಟಿ ವರಮಾನವಿದೆ. ಆದರೆ, ಬೀಡಿ, ಸಿಗರೇಟು ಸೇದುವುದರಿಂದ ಜನರಿಗೆ ಉಂಟಾಗುವ ಕಾಯಿಲೆಗಳನ್ನು ಗುಣಪಡಿಸಲು ರು. 13500 ಕೋಟಿ ಖರ್ಚು ಮಾಡಲಾಗುತ್ತದೆ. ತಂಬಾಕು ಸೇವನೆಯಿಂದ ಅಸ್ತಮಾ, ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್, ಕುರುಡುತನ, ಗ್ಯಾಂಗ್ರಿನ್, ಅಲ್ಸರ್, ನರಗಳ ದೌರ್ಬಲ್ಯ, ರಕ್ತಹೀನತೆ ಸೇರಿದಂತೆ ಹಲವ ಕಾಯಿಲೆಗಳು ಬರುತ್ತವೆ. ಹಾಗಾಗಿ ಯುವಕ, ಯುವತಿಯರು ಹಾಗೂ ಸಾರ್ವಜನಿಕರು ಈ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಸ್ವಾಸ್ಥ, ಸದೃಢ ಸಮಾಜ ನಿರ್ಮಾಣ ಮಾಡಲು ಸನ್ನದ್ಧರಾಗುವಂತೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವೀನ, ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಪಾಟೀಲ. ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಪಾಟೀಲ ಮುಂತಾದವರು ಮಾತನಾಡಿದರು. ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ವೈ.ಕೆ. ಭಜಂತ್ರಿ ಉಪನ್ಯಾಸ ನೀಡಿದರು. ಡಿಎಚ್ಓ ಡಾ. ಡಿ.ಬಿ. ಚೆನ್ನಶೆಟ್ಟಿ, ಪಲ್ಲೇದ, ಆಹಾರ ಇಲಾಖೆಯ ಉಪನಿರ್ದೇಶಕ ಶಶಿಧರ ಕುರೇರ ಮುಂತಾದವರು ಪಾಲ್ಗೊಂಡಿದ್ದರು. ಮಸರಕಲ್ಲ ನಿರೂಪಿಸಿ, ವಂದಿಸಿದರು.