ಶತಮಾನದ ಮಾದರಿ ಶಾಲೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 31
ಈ ಶಾಲೆಯಲ್ಲೀಗ ಒಡೆದ ಹೆಂಚು, ಮುರಿದ ಕುರ್ಚಿ, ಡೆಸ್ಕುಗಳು, ಹಾಳು ಬಿದ್ದ ಮಳೆಕೊಯ್ಲು ನೀರಿನ ಘಟಕ, ಪಾಳು ಬಿದ್ದ ಇತರೆ ಕಟ್ಟಿಗೆಯ ಅವಶೇಷಗಳು.
ಇದೊಂದು ಶತಮಾನೋತ್ಸವ ಆಚರಿಸಿಕೊಂಡ ಮಾದರಿ ಪ್ರಾಥಮಿಕ ಶಾಲೆಯ ಕಥೆ ವ್ಯಥೆ.
ಹೀಗೆ ಹಾಳು ಕೊಂಪೆಯನ್ನು ನೆನಪಿಸುವ ಶಾಲೆ ಸಮೀಪದ ಪುಟಗಾಂವ್ ಬಡ್ನಿ ಗ್ರಾಮದ ಮಾದರಿ ಪ್ರಾಥಮಿಕ ಶಾಲೆ. ಶಾಲೆಯು ಪ್ರಾರಂಭವಾಗಿದ್ದರೂ ಶಾಲೆಗೆ ಮಾತ್ರ ಮೂಲಸೌಲಭ್ಯಗಳ ಕೊರತೆಯಿಂದಾಗಿ ಆವರಣ ಗಲೀಜು ಸ್ಥಿತಿಯಲ್ಲಿಯೇ ಇದ್ದು, ತಳಿರು ತೋರಣಗಳಿಂದ ಶೃಂಗಾರಗೊಂಡು ಮುದ್ದು ಮಕ್ಕಳನ್ನು ಸ್ವಾಗತಿಸಬೇಕಾದ ಶಾಲೆ ಅವಸಾನದ ಅಂಚಿನಲ್ಲಿದ್ದಂತೆ ಕಾಣುತ್ತಿದೆ. ಶಾಲೆಯ ಹೆಂಚುಗಳು ಒಡೆದು ಹೋಗಿ ಸುಮಾರು ದಿನಗಳಾದರೂ ದುರಸ್ತಿ ಮಾಡಿಸಿಲ್ಲ. ಕೆಲ ಕೋಣೆಗಳಲ್ಲಿ ಮುರಿದ ಕುರ್ಚಿಗಳು, ಡೆಸ್ಕುಗಳಿದ್ದು, ಇದರೊಟ್ಟಿಗೆ ಹಳೆಯ ಮರದ ಕಟ್ಟಿಗೆ ಇಟ್ಟಿರುವುದರಿಂದ ಸಾವಿರಾರು ರೂಪಾಯಿ ತೆತ್ತು ಖರೀದಿಸಿರುವ ಡೆಸ್ಕ್‌ಗಳು ಕೂಡಾ ಹಾಳಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಮಾತ್ರ ಗಮನಹರಿಸಿಲ್ಲ.
ಸಾವಿರಾರು ಜನರಿಗೆ ಪಾಠ ಹೇಳಿಕೊಟ್ಟ ಶಾಲಾ ಕಟ್ಟಡವಿಂದು ದುರಸ್ತಿ ಕಾಣದೆ ಉಳಿದಿರುವುದು ಶಿಕ್ಷಣ ಪ್ರೇಮಿಗಳಿಗೆ, ಗ್ರಾಮಸ್ಥರಿಗೆ ನೋವು ತಂದಿದೆ. ಇಷ್ಟಾದರೂ ಇಲಾಖೆಯ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಅಲ್ಲದೆ, ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ ಎನ್ನಲಾಗುತ್ತಿದ್ದು, ಶಾಲೆಯ ಆಡಳಿತ ಮಂಡಳಿ ಇದರ ಬಗ್ಗೆ ಬಿಗಿ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಮಳೆಕೊಯ್ಲು ಘಟಕವೂ ಸ್ತಬ್ಧ: ಶಾಲಾ ಆವರಣದಲ್ಲಿ ಬಿದ್ದ ಮಳೆ ನೀರು ಅನಾವಶ್ಯಕವಾಗಿ ಹರಿದು ಹೋಗದಂತೆ ತಡೆದು ಮಳೆಯ ನೀರನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಕುಡಿವ ನೀರಿಗೆ ನಾವು ಪರದಾಡಬೇಕಿಲ್ಲ ಎನ್ನುವ ಮಹದಾಸೆ ಇಟ್ಟುಕೊಂಡು ಸರ್ಕಾರ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಳೆಕೊಯ್ಲು ವಿಧಾನ ಅಳವಡಿಸಿಕೊಂಡು ಕುಡಿವ ನೀರಿನ ಸಮಸ್ಯೆ ಬಗೆಹರಿಸಿಕೊಂಡಿವೆ. ಆದರೆ, ಬಡ್ನಿ ಮಾದರಿ ಪ್ರಾಥಮಿಕ ಶಾಲೆಯ ಮಳೆಕೊಯ್ಲಿನ ಘಟಕವು ಈಗ ಸ್ತಬ್ಧವಾಗಿದೆ.
ಸರ್ಕಾರ ಶಾಲಾ ಪ್ರಾರಂಭೋತ್ಸವಕ್ಕೆ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯ ಮಾಡುತ್ತಿವೆ. ಆದರೆ, ಶಾಲೆಯ ವಾತಾವರಣವೆ ಹದಗೆಟ್ಟು ಹೋಗಿದ್ದರೆ, ಮಕ್ಕಳು ಹೇಗೆ ತಾನೇ ಶಿಕ್ಷಣವಂತರಾಗಲು ಸಾಧ್ಯ ಎಂಬ ಪ್ರಶ್ನೆ ಪಾಲಕರದ್ದು.
-ಅಶೋಕ ಸೊರಟೂರ