ಹಿಂದೂ-ಮುಸ್ಲಿಂ ಭಾವೈಕ್ಯದ ದರ್ಗಾ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 31
ಶರಣರು, ಸಂತರು, ಸೂಫಿಗಳು, ದಾಸರು, ಮಹಾತ್ಮರು ಆದಿಕಾಲದಿಂದಲೂ ಭಾರತದ ಪುಣ್ಯಭೂಮಿಯಲ್ಲಿ ಜನಿಸಿದ್ದಾರೆ. ಅಂತಹ ಸಂತ ಶರಣರೆಲ್ಲರೂ ಸಕಲ ಜಾತಿ ಜನಾಂಗಕ್ಕೂ ಪೂಜ್ಯನಿಯರೇ ಆಗಿದ್ದಾರೆ. ಅವರ ವೇಷ, ಭಾಷೆ, ಆಹಾರ, ಇರುವಿಕೆ ಎಲ್ಲವೂ ಜನತೆಗೆ ದಿವ್ಯ ಆದರ್ಶಗಳೇ ಆಗಿವೆ. ಇಂತಹ ಮಹಾತ್ಮರಲ್ಲಿ ನರೇಗಲ್ಲ, ಅಡ್ನೂರ ಹಾಗೂ ಹಳ್ಳಿಕೇರಿ ದರ್ಗಾದ ಸಂತರಾದ ಖಲೀಫ ರಹಿಮಾನ್ ಶಾವಲಿ ಒಬ್ಬರು.
ಸೂಫಿ ಸಂತರು 17ನೇ ಶತಮಾನದ ಮಧ್ಯ ಭಾಗದಲ್ಲಿ ಅಲಿ ಆದಿಲ್ ಶಾಹಿ ದರ್ಬಾರ್ದಲ್ಲಿ ಹಿರಿಯ ಧಾರ್ಮಿಕ ದರ್ಶಕರಾಗಿದ್ದರು. ರಕ್ಕಸಗಿ-ತಂಗಡಗಿ ಯುದ್ಧದ ನಂತರ ಕಾರಣಾಂತರದಿಂದ ಅಲ್ಲಿಂದ ಹೊರಟು ಅನೇಕ ಪ್ರದೇಶಗಳಲ್ಲಿ ಸಂಚರಿಸಿ ರೋಣ ತಾಲೂಕು ನರೇಗಲ್ಲದಲ್ಲಿ ನೆಲೆಸಿದರೆಂಬ ಪ್ರತೀತಿ ಇದೆ. ತಮ್ಮ ಅತ್ಯುನ್ನತ ಮಾನವತಾವಾದಗಳಿಂದ ಬಡವ-ಬಲ್ಲಿದ, ಮೇಲು-ಕೀಳು, ಹಿಂದೂ-ಮುಸ್ಲಿಂ ಎಂಬ ಭೇದಎಣಿಸದೇ ಸಕಲರಲ್ಲಿ ಪರಮಾತ್ಮನನ್ನು ಕಂಡಂತಹ ಪುಣ್ಯಭೂಮಿಯೇ ಇಲ್ಲಿನ ದರ್ಗಾ. ಮಹಾತ್ಮರ ದಿವ್ಯ ಮಾರ್ಗದರ್ಶನದಲ್ಲಿ ನರೇಗಲ್ಲನಲ್ಲಿ ಜೂನ್ 3, 4 ಹಾಗೂ 5 ರಂದು ಖಲೀಫ ರಹಿಮಾನ್ಶಾವಲಿ ಉರೂಸ್ ವಿಜೃಂಬಣೆಯಿಂದ ಜರುಗುತ್ತದೆ.
ಹಿಂದೂ-ಮುಸ್ಲಿಂ ಸಂಸ್ಕೃತಿ: ಈ ದರ್ಗಾದಲ್ಲಿರುವ ಲಕ್ಷ್ಮಿ ದೇವಿಗೆ ಎಲ್ಲ ಹಿಂದೂ-ಮುಸ್ಲಿಂ ಭಕ್ತರು ಕಾಯಿ ಒಡೆದು, ಕರ್ಪೂರ ಬೆಳಗಿ, ಕರಿಗಡಬು ಸಾಂಪ್ರದಾಯಿಕವಾಗಿ ಎಡೆಕೊಡುವ ಪದ್ಧತಿ ಹಿಂದೂಗಳಂತಾದರೆ, ಶ್ರೀಗಂಧದ ಮೆರವಣಿಗೆ ಮುಜಾವರವರ ಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತಿ-ಭಾವಗಳಿಂದ ಕೋಲಾಟ, ಹೆಜ್ಜೆ ಕುಣಿತ, ಡೊಳ್ಳು ಹಾಗೂ ಮುಂತಾದ ವಾದ್ಯ ವೃಂದದೊಂದಿಗೆ ದರ್ಗಾ ತಲುಪುವುದು ಮುಸ್ಲಿಂ ಸಂಸ್ಕೃತಿಯಂತೆ ಬಿಂಬಿತವಾಗುತ್ತದೆ.ಅನ್ನಸಂತರ್ಪಣೆ, ದೀಪೋತ್ಸವ, ಮದ್ದು ಹಾರಿಸುವುದು, ಖವ್ವಾಲಿ ಹಾಡುಗಾರಿಕೆ, ನಾಟಕ, ಬಯಲಾಟದಂತಹ ಕಾರ್ಯಕ್ರಮಗಳು ಜರುಗುತ್ತವೆ. ನೆರೆಯ ಗ್ರಾಮವಾದ ಕೋಚಲಾಪುರದಲ್ಲಿರುವ ಲಕ್ಷ್ಮಮ್ಮನ ಪಲ್ಲಕ್ಕಿಗೆ ಅಬ್ದುಲ್ ರಹಿಮಾನ್ ಶಾವಲಿಯವರು ವಾದ್ಯ ವೃಂದದೊಂದಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ತರುವುದು ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ದರ್ಗಾದ ಈಗಿನ ಶರಣರಾದ ರಹಿಮಾನ್ ಶಾವಲಿ ಅಜ್ಜನವರು ಹಮ್ಮಿಕೊಂಡು ಧಾರ್ಮಿಕ ಸಾಮರಸ್ಯ ಬೆಳೆಸಿಕೊಂಡು ಬಂದಿದ್ದಾರೆ.