ಸುದ್ದಿ ಸಂಕ್ಷೇಪ
ಭಾಷಾಭಿಮಾನ ಒಂದೇ ದಿನಕ್ಕೆ ಸೀಮಿತವಾಗದಿರಲಿ
ನರಗುಂದ: ಕನ್ನಡ ಭಾಷೆಯ ಮೇಲಿನ ನಮ್ಮ ಪ್ರೇಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ನಾವೆಲ್ಲಾ ನಿರಂತರ ಭಾಷೆ ಬೆಳೆಸುವತ್ತ ಗಮನ ನೀಡಬೇಕು ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು. ಅವರು ಶುಕ್ರವಾರ ಪಟ್ಟಣದ ಹಳೆ ತಹಸೀಲ್ದಾರ್ ಕಾರ್ಯಾಲದದಿಂದ ಹೊರಟ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕರ್ನಾಟಕ ಏಕೀಕರಣಗೊಂಡು ಹಲವು ವರುಷಗಳೇ ಗತಿಸಿದರೂ ಕನ್ನಡ ಭಾಷೆ ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡದ ಬಗ್ಗೆ ಮಾತನಾಡಿ ವರ್ಷಪೂರ್ತಿ ಅದನ್ನು ಮರೆಯುತ್ತೇವೆ. ಅದಕ್ಕಾಗಿ ಹೀಗಾಗುತ್ತಿದೆ ಎಂದರು. ಚಿಕ್ಕನರಗುಂದ ಸರ್ಕಾರಿ ಕಾಲೇಜ ಪ್ರಾಚಾರ್ಯ ಎಂ.ಎಸ್. ಯಾವಗಲ್ಲ ಮಾತನಾಡಿ, ಕನ್ನಡ ಭಾಷೆ ಇಂದು ಹಲವಾರು ಭಾಷೆಗಳ ನಡುವೆ ಸಿಲುಕಿ ಬೆಳವಣಿಗೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಎಸ್. ರಾಜಶೇಖರ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಪುರಸಭೆ ಸದಸ್ಯ ಸಿ.ಬಿ.ಪಾಟೀಲ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಸಿ ಮುಂತಾದವರು ಹಾಜರಿದ್ದರು.
ಕನ್ನಡ ಭಾಷೆ ಚಿರಾಯು
ನರೇಗಲ್ಲ: ಕನ್ನಡ ಭಾಷೆ ಚಿರಾಯು. ಅದು ತನ್ನದೇ ಆದ ವಿಶೇಷವಾದ ಸ್ಥಾನಮಾನವನ್ನು ಹೊಂದಿದೆ ಎಂದು ಪಪಂ ಸದಸ್ಯ ರಮೇಶ ಕಳಕೊಣ್ಣವರ ತಿಳಿಸಿದರು. ಅವರು ಸ್ಥಳೀಯ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಆಯೋಜಿಸಿದ್ದ 58ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಏಕೀಕರಣ ಮುಖಂಡ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿಗೆ ಕಾಯಕಲ್ಪ ನೀಡಿ, ಅವರ ಪುತ್ಥಳಿಯನ್ನು ಸಮೀಪದ ಜಕ್ಕಲಿ ಗ್ರಾಮದಲ್ಲಿ ಸ್ಥಾಪಿಸಬೇಕು. ಇಲ್ಲದಿದ್ದರೆ ಅಂದಾನಪ್ಪ ದೊಡ್ಡಮೇಟಿಯವರ ನೆನಪು ಇಲ್ಲದಂತಾಗುತ್ತದೆ ಎಂದರು. ಸೋಮು ಲಕ್ಕನಗೌಡ್ರ ಮುಂತಾದವರು ಮಾತನಾಡಿದರು. ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ಖಾದರಬಾಷಾ ಹೂಲಗೇರಿ, ವಿನಾಯಕ ಗ್ರಾಮಪುರೋಹಿತ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಬೇವಿನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಕಳಕೊಣ್ಣವರ ಸ್ವಾಗತಿಸಿ ನಿರೂಪಿಸಿದರು. ವಿನಯ ಕಣವಿ ವಂದಿಸಿದರು.
ರಾಜ್ಯೋತ್ಸವ ಆಚರಣೆ
ಹೊಳೆಆಲೂರ: ಕಲ್ಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಚಾರ್ಯ ಬಿ.ಬಿ. ಬಿಜ್ಜರಗಿ ಮತ್ತು ಜಿ.ಸಿ. ಮೋಕಾಶಿಯವರು ನಾಡದೇವಿ ಭುವನೇಶ್ವರಿ ಮತ್ತು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ದೈಹಿಕ ನಿರ್ದೇಶಕ ಬಿ.ಎಸ್. ಗಿರಿತಿಮ್ಮಣ್ಣವರ, ಎಸ್.ವಿ. ಹೂಗಾರ, ಎಸ್.ಬಿ. ಗುಣಾರಿ, ಗೋವಿಂದ ಖ್ಯಾಡದ ಮೊದಲಾದವರು ಉಪಸ್ಥಿತರಿದ್ದರು.