ಕನ್ನಡ ಸಾಹಿತ್ಯ ಪರಿಷತ್ ನುಡಿ ಹಬ್ಬ
ನರೇಗಲ್ಲ: ಅಂದಾನಪ್ಪನವರು ನೆಲೆಸಿದ್ದ ನೆಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನುಡಿಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಹಾಲಕೇರೆ ಅನ್ನದಾನೇಶ್ವರ ಮಠದ ಅನ್ನದಾನ ಶ್ರೀಗಳು ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗದಗ ಕಸಾಪ, ತಾಲೂಕು ಕಸಾಪ ರೋಣ ಆಶ್ರಯದಲ್ಲಿ ಸಂಜೆ 5ಕ್ಕೆ ಭುವನೇಶ್ವರಿ ರಂಗಮಂಟಪದಲ್ಲಿ ನುಡಿಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರು. 5 ಲಕ್ಷ ಅನುದಾನ: ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಅಂದಾನಪ್ಪನವರ ಸ್ಮಾರಕ ಜಿಲ್ಲೆಯಲ್ಲಾಗಬೇಕೆಂದು ಈ ಹಿಂದೆ ಜಿಲ್ಲಾ ಕಸಾಪ ನಿರ್ಧರಿಸಿತ್ತು, ಅಂತಹ ವಿಚಾರ ಇಲ್ಲಿ ಪ್ರಸ್ತಾಪವಾಗಿದೆ. ಅಂದಾನಪ್ಪನವರ ವಾಸಿಸುತ್ತಿದ್ದ ಮನೆಯನ್ನು ಅವರ ಪುತ್ರ ಸಾರ್ವಜನಿಕ ಉಪಯೋಗಕ್ಕೆ ಕೊಡುವುದಾದಲ್ಲಿ ಅಲ್ಲಿ ಒಂದು ಭುವನೇಶ್ವರಿ ತಾಯಿಯ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲಾಗುವುದು. ಆ ಪ್ರಾರ್ಥನಾ ಮಂದಿರಕ್ಕೆ ರು. 5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ಕಸಾಪ ಬೇಡಿಕೆಯಂತೆ ರೋಣದಲ್ಲಿ ಮುಂಬರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು. ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಆಶಯ ನುಡಿಗಳನ್ನಾಡಿದರು.
ನ್ಯಾಯವಾದಿ ರವೀಂದ್ರನಾಥ ದೊಡ್ಡಮೇಟಿ, ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಮುಂತಾದವರು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ಬನ್ನೂರ ಏಕೀಕರಣಕ್ಕೆ ಅಂದಾನಪ್ಪ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಲಲಿತಾ ಪೂಜಾರ, ಜಕ್ಕಲಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಮೇಟಿ, ತಾಪಂ ಸದಸ್ಯೆ ಮಾಲಾನಬಿ ಗಡಾದ, ಗ್ರಾಪಂ ಉಪಾಧ್ಯಕ್ಷೆ ಭುವನೇಶ್ವರಿ ಪಲ್ಲೇದ, ಸುರೇಶಬಾಬು ಅರಹುಣಸಿ, ಡಾ. ಬಿ.ಎಫ್. ದಂಡಿನ ಹಾಜರಿದ್ದರು. ಕೊತಬಾಳದ ಶಂಕ್ರಣ್ಣ ಸಂಕಣ್ಣ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಂ.ಎಸ್. ಧಡೇಸೂರಮಠ ಸ್ವಾಗತಿಸಿದರು. ಕೆ.ಎಸ್. ಕಳಕೊಣ್ಣವರ ನಿರೂಪಿಸಿದರು. ಡಾ. ಶಿವರಾಜ ಗುರಿಕಾರ ವಂದಿಸಿದರು.