ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮೃದ್ಧ ಮಳೆ, ಬೆಳೆ: ಸಂಭ್ರಮದ ದೀಪಾವಳಿ

Vishwanath S
Updated On : 4 Nov 2013, 11:39 am


ಕನ್ನಡಪ್ರಭ ವಾರ್ತೆ, ಗದಗ, ನ. 3

ಜಿಲ್ಲಾದ್ಯಂತ ಹದವರಿತ ಮಳೆ, ಬಿತ್ತಿದ ಬೆಳೆಗಳೆಲ್ಲ ಹಚ್ಚಹಸಿರಿನಿಂದ ಸಮೃದ್ಧವಾಗಿ ಕಂಗೊಳಿಸುತ್ತಿವೆ. ಕಿರಾಣಿ, ದಿನಸಿ, ಬಟ್ಟೆ ವ್ಯಾಪಾರ, ಹಣ್ಣು, ಹೂ, ತರಕಾರಿ ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿ ತುಳುಕುತ್ತಿವೆ. ಎಲ್ಲರ ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದೆ. ಇದೆಲ್ಲ ಕಂಡುಬಂದಿದ್ದು ಗದಗ ಜಿಲ್ಲೆಯಲ್ಲಿ.
ಪ್ರಸಕ್ತ ಸಾಲಿನ ದೀಪಾವಳಿ ಹಬ್ಬವನ್ನು ಸಾರ್ವಜನಿಕರು ಸಂಭ್ರಮದಿಂದ ಸ್ವಾಗತಿಸಿದ್ದು, ಜಿಲ್ಲಾದ್ಯಂತ ದೀಪಾವಳಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಳೆದ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಆವರಿಸಿದ್ದ ಬರಗಾಲದಿಂದಾಗಿ ರೈತರು, ಸಾರ್ವಜನಿಕರು ಬರದ ನಡುವೆಯೇ ಸಾಂಕೇತಿಕವಾಗಿ ಹಬ್ಬ  ಆಚರಿಸಿದ್ದರು. ಈ ಬಾರಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತರ ಮೊರೆಗೆ ವರುಣ ಜಿಲ್ಲಾದ್ಯಂತ ಕೃಪೆ ತೋರಿದ್ದಾನೆ.
ಅಲ್ಲದೇ ರೈತರು ಈಗಾಗಲೇ ಹೊಲಗಳಲ್ಲಿ ಕಡಲೆ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ದು, ಎಲ್ಲ ಬೆಳೆಗಳು ಉತ್ತಮ ರೀತಿಯಲ್ಲಿದ್ದು, ಇದರ ನಡುವೆಯೇ ಬಂದಿರುವ ದೀಪಾವಳಿ ಹಬ್ಬದ ಮೊದಲ ದಿನವಾದ ಶನಿವಾರ ನರಕ ಚತುರ್ದಶಿಯನ್ನು ಜನತೆ ಸಂಭ್ರಮದಿಂದ ಆಚರಿಸಿದರು.
ಉತ್ತರ ಕರ್ನಾಟದಲ್ಲಿಯೇ ಅತಿ ಪ್ರಾಮುಖ್ಯತೆ ಪಡೆದಿರುವ ಹಬ್ಬವೇ ಈ ದೀಪಾವಳಿ ಈ ಹಬ್ಬವನ್ನು ಜನತೆ 3 ದಿನಗಳ ಕಾಲ ಸಂಭ್ರಮದಿಂದ ಆಚರಿಸುವುದು ವಾಡಿಕೆ.
ಹಬ್ಬದ ಮೊದಲ ದಿನವಾದ ನರಕ ಚತುರ್ದಶಿಯಂದು ಸಾರ್ವಜನಿಕರು ಉಪವಾಸ ವ್ರತ, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಶನಿವಾರ ನರಕಚತುರ್ದಶಿಯಂದು ಮಹಿಳೆಯರು ಉಪವಾಸ ವ್ರತ ಕೈಗೊಂಡು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ದೃಶ್ಯ ಜಿಲ್ಲಾದ್ಯಂತ ಕಂಡುಬಂತು.
ವ್ಯಾಪಾರ ಬಲುಜೋರು: ಈಗಾಗಲೇ ಬರದಿಂದಾಗಿ ಬೇಸತ್ತಿದ್ದ ರೈತ ಈ ಬಾರಿ ಉತ್ತಮ ಮಳೆಯಿಂದಾಗಿ ಹೊಸ ಹೊಸ ಕನಸು ಕಾಣಲು ಕಾರಣವಾಗಿದೆ. ಜಿಲ್ಲಾದ್ಯಂತ ಸಂಭ್ರಮದ ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರು ಮುಂದಾಗಿದ್ದು,  ಎಲ್ಲೆಡೆ ವಿದ್ಯುತ್ತಿನ ಅಲಂಕಾರ ಎದ್ದು ಕಾಣುತ್ತಿದೆ. ಇನ್ನು ಮಾರುಕಟ್ಟೆ ಜನಜಂಗುಳಿಯಿಂದ ತುಂಬಿವೆ. ಎಲ್ಲೆಡೆ ದೀಪಾವಳಿ ಹಬ್ಬಕ್ಕೆ ಬೇಕಾಗುವ ಹಣ್ಣು, ಹಂಪಲು, ಹೂವು ಇನ್ನಿತರೇ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಲೆ ಏರಿಕೆ ಬಿಸಿ
ದೀಪಾವಳಿ ಹಬ್ಬದಲ್ಲಿ ಎಲ್ಲಿ ನೋಡಿದರೂ ಬೆಲೆ ಏರಿಕೆಯೇ ತಾಂಡವವಾಡುತ್ತಿದೆ. ಕೆಲ ದಿನಗಳ ಹಿಂದೆ ರು. 50-60.ಗೆ ಸಿಗುತ್ತಿದ್ದ ಸೇಬು ಈಗ ರು. 120-150ಕ್ಕೇರಿದೆ. ರು. 30-40 ಇದ್ದ ಡಜನ್ ಬಾಳೆ ಹಣ್ಣಿನ ಬೆಲೆ ಈಗ ರು. 50-70 ಏರಿದೆ. ಇನ್ನು ಹೂವುಗಳ ಬೆಲೆಯಂತೂ ಹೇಳತೀರದು. ಬಿಳಿ ಸೇವಂತಿ ರು. 200 ರಿಂದ 230 ಕೆಜಿ, ಹಳದಿ ಸೇವಂತಿಗೆ ರು. 180-210 ಕೆಜಿ, ಆಬಾಲಿ ಕೆಜಿಗೆ 1200-1250, ಕಾಕಡಾ ಹೂವು ಕೆಜಿಗೆ ರು. 500-540 ಕೆಜಿ, ಸುಗಂಧಿ 1 ಕೆಜಿ ಹೂವಿಗೆ ರು. 400-460, ಚೆಂಡ ಹೂವು ಕೆಜಿಗೆ ರು. 100-130 ಇದೆ.
ವ್ಯಾಪಾರ ಜೋರು
ಕಳೆದ ಬಾರಿಗಿಂತಲೂ ಈ ಬಾರಿ ವ್ಯಾಪಾರ ತುಂಬಾ ಚೆನ್ನಾಗಿದೆ. ಕಳೆದ 2-3 ದಿನಗಳಿಂದಲೂ ಬಟ್ಟೆ, ಹೂ, ಹಣ್ಣು, ತರಕಾರಿ ಸೇರಿದಂತೆ ಇನ್ನಿತರೆ ವ್ಯಾಪಾರ ಉತ್ತಮವಾಗಿದೆ. ಇಂದಿನ ಬೆಲೆ ಏರಿಕೆಯ ನಡುವೆಯೂ ಜನರು ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿರುವುದು ಸಂತಸ ತಂದಿದೆ.
- ಮಕಬೂಲ್ಸಾಬ ಶಿರಹಟ್ಟಿ, ಬಾಷಾಸಾಬ ಮಲ್ಲಸಮುದ್ರ, ಶಮೀದ ಚಟ್ನಾಳ, ರಫೀಕ ಅತ್ತಾರ,
ಹೂವು ವ್ಯಾಪಾರಸ್ಥರು.
ಈ ಬಾರಿ ಬೆಳೆ ಎಲ್ಲಾ ಬಾಳ ಚಲೋ ಅದಾವ್ರಿ. ಎಲ್ಲಾರೂ ಈ ದೀಪಾವಳಿನ ಚಂದ ಆಚರಣಿ ಮಾಡಾಕುಂತಾರೀ... ಇನ್ನ ಪೂಜೆಕ ಹಣ್ಣ, ಹೂವಿನ ರೇಟ ಕೇಳಿದ್ರ ಮೋರ್ಚೆನಾ ಹೋಕೈತ್ರಿ. ಹಿಂದ ಕಿಸೆತುಂಬ ಹಣ ತಂದ ಕೈಚೀಲ ತುಂಬ ತರಕಾರಿ ತಗೊಂಡ ಹೊಕ್ಕಿದ್ವಿ. ಈಗ ಕೈಚೀಲ ತುಂಬ ಹಣ ತಂದ ಕಿಸೆತುಂಬ ತರಕಾರಿ ತಗೋಂಡ ಹೋಗೋ ಅಂತ ಪರಿಸ್ಥಿತಿ ಬಂದೈತ್ರಿ. ಏನ್ ಮಾಡೋದ್ರಿ ಹಬ್ಬ ಆಚರ್ಸ ಬೇಕಲ್ಲರಿ...
- ಪರಯ್ಯ ಭೂಸನೂರಮಠ, ಪ್ರಕಾಶ ಹಡಪದ, ಮಹೇಶ ಸಂಕನಗೌಡ್ರ, ಸತೀಶ ಕಿತ್ತೂರ,
ಸಾರ್ವಜನಿಕರು
ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement