ಕನ್ನಡ ಹೃದಯವಂತಿಕೆ ಭಾಷೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 4
ಕನ್ನಡ ಹೃದಯವಂತಿಕೆ ಭಾಷೆ. ಸರಳ ಮತ್ತು ಸುಂದರ ಹಾಗೂ ಸಮೃದ್ಧಿಯಾಗಿರುವ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ನಮ್ಮಲ್ಲಿದೆ. ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಕನ್ನಡದ ಕಂಪನ್ನು ಹರಡಿಸುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಸ್ಥಳೀಯ ಬಸವ ಫೌಂಡೇಷನ್ ಮತ್ತು ಬಸವ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ಮುಕ್ತ ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ವಿಶಾಲತೆ ಮತ್ತು ಸಾತ್ವಿಕತೆಯನ್ನು ವಿವರಿಸಿದ ಶಾಸಕರು ಕನ್ನಡ 2 ಸಾವಿರ ವರ್ಷಗಳ ಇತಿಹಾಸವಿರುವ ಸಮೃದ್ಧವಾದ ಭಾಷೆಯಾಗಿದ್ದು, ನಾವೆಲ್ಲರೂ ಕನ್ನಡವನ್ನು ಉಳಿಸುವ ಮೂಲಕ ಕನ್ನಡದ ಹಿರಿಮೆಯನ್ನು ನಾಡಿನಾದ್ಯಂತ ಪಸರಿಸುವ ಕಾರ್ಯ ಮಾಡಬೇಕಿದೆ ಎಂದರು.
ಬಸವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ವೈ.ಎನ್. ಗೌಡರ, ಆರ್.ಎಲ್. ಪೊಲೀಸ್‌ಪಾಟೀಲ, ಎಂ.ಎಂ. ಹೆಬ್ಬಾಳ, ಸಿ.ಕೆ. ಗಣಪ್ಪನವರ ಮುಂತಾದವರು ಉಪಸ್ಥಿತರಿದ್ದರು.
ಬಸವರಾಜ ರಾಮೇನಹಳ್ಳಿ ಸ್ವಾಗತಿಸಿದರು. ರವಿ ಪಾಟೀಲ ನಿರೂಪಿಸಿದರು.