ಕೈಗಾರಿಕೋದ್ಯಮಿಗಳು ಪ್ರಗತಿಯಾಗಲಿ: ಶೆಟ್ಟಿ
ಕನ್ನಡಪ್ರಭ ವಾರ್ತೆ, ಗದಗ, ನ. 4
ದೇಶದ ಅಭಿವೃದ್ಧಿಗೆ ಕೈಗಾರಿಕೋದ್ಯಮದಾರರು ಹೆಚ್ಚು ಪ್ರಗತಿಯಾಗಬೇಕು ಎಂದು ಮೈಸೂರು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಸಮನ್ವಯ ಸಮಿತಿ ಸದಸ್ಯ ಸುಧಾಕರ ಶೆಟ್ಟಿ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಅಭಿವೃದ್ಧಿಗಾಗಿ ಎಲ್ಲ ವಾಣಿಜ್ಯೋದ್ಯಮ ಸಂಸ್ಥೆಗಳು ಪ್ರತಿ ಜಿಲ್ಲಾವಾರು ವಾಣಿಜ್ಯೋದ್ಯಮ ಸಂಸ್ಥೆಗಳ ಸರ್ವೇ ಕಾರ್ಯದ ಜತೆಗೆ ಮುಕ್ತವಾಗಿ ಚರ್ಚಿಸುವ ಮೂಲಕ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮದಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದೆ ತರುವುದರಿಂದ ಕೈಗಾರಿಕೋದ್ಯಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗಾಗಲೇ ದೇಶದಲ್ಲಿ ಅನೇಕ ಕೈಗಾರಿಕೋದ್ಯಮದಾರರು ಹಾಗೂ ವ್ಯಾಪಾರಸ್ಥರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಡ್ಡಿದರ ಹೆಚ್ಚಳವಾಗುತ್ತಿರುವುದರಿಂದ ಸಾಕಷ್ಟು ಕೈಗಾರಿಕೆಗಳು ಇತರೆ ಕಡೆಗಳಿಂದ ಸಾಲ ಸೌಲಭ್ಯವನ್ನು ಪಡೆದುಕೊಂಡು ಉದ್ಯಮಗಳನ್ನು ನಡೆಸುತ್ತಿರುವುದರಿಂದ ಅನೇಕ ತೊಂದರೆಗಳಾಗಿ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ. ಆದ್ದರಿಂದ ಎಲ್ಲ ವಾಣಿಜ್ಯೋದ್ಯಮ ಸಂಸ್ಥೆಗಳು ಪ್ರಬಲವಾಗಬೇಕು. ಅದರ ಜತೆಗೆ ವ್ಯಾಪಾರ ಸಮೂಹವು ಒಗ್ಗಟಾದಲ್ಲಿ ಉದ್ಯಮದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ, ಸಂಸ್ಥೆಯ ಉಪಾಧ್ಯಕ್ಷ ತೋಂಟೇಶ ಕುರಡಗಿ ಮಾತನಾಡಿ, ಸರ್ಕಾರವು ಈ ಹಿಂದೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಾಕಷ್ಟು ಉದ್ಯಮಗಳು ಉದ್ಯಮ ಸ್ಥಾಪಿಸಲು ಒಡಂಬಡಿಕೆಗಳು ಆಗಿದ್ದು, ಅವು ಎಷ್ಟರ ಮಟ್ಟಿಗೆ ಕಾರ್ಯಗತವಾಗಿವೆ ಎಂದು ತಿಳಿಯುತ್ತಿಲ್ಲ. ಇನ್ನು ಗದಗ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ಯಮ ಸ್ಥಾಪಿಸಲು ಒಡಂಬಡಿಕೆಯಾಗಿದ್ದು, ಅವು ಏಕೆ ಕಾರ್ಯಗತವಾಗಲಿಲ್ಲ ಎಂಬುದರ ಬಗ್ಗೆ ತಮ್ಮ ಮುಂದಿನ ಸಭೆಯಲ್ಲಿ ಚರ್ಚಿಸಬೇಕು. ತಾವು ಇವುಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸರ್ಕಾರದ ಗಮನಕ್ಕೆ ತರುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಬಳ್ಳಾರಿ ಜಿಲ್ಲೆಯ ಚೇಂಬರ್ ಅಧ್ಯಕ್ಷ ಯಶವಂತರಾಜ, ಶ್ರೀಶೈಲ ರಾಮಣ್ಣ, ಜಯಂತ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಸುರಕೋಡ ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಸಹ ಗೌರವ ಕಾರ್ಯದರ್ಶಿ ಅರವಿಂದ ಪಟೇಲ್ ನಿರೂಪಿಸಿ, ವಂದಿಸಿದರು.