ಕ್ರೀಡೆಯಿಂದ ಬೌದ್ಧಿಕ ಬೆಳವಣಿಗೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 4
ಕ್ರೀಡೆಗಳು ಮನುಷ್ಯನ ಕ್ರೀಯಾಶೀಲ ಚಟುವಟಿಕೆಗೆ ಪೂರಕವಾಗುವುದರ ಜತೆಗೆ ಭೌದ್ಧಿಕ ಗುಣಮಟ್ಟ ಹೆಚ್ಚಲು ಸಹಕಾರಿಯಾಗುತ್ತವೆ ಎಂದು ರಾಜೂರು ಗ್ರಾಪಂ ಸದಸ್ಯ ಪರಶುರಾಮ ಚಿಲಝರಿ ಹೇಳಿದರು.
ಸಮೀಪದ ರಾಜೂರಿನಲ್ಲಿ 58ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಓಂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೀಡಾ ಸಂಘದಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಿಳಿ ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ವಿಶ್ವದ ಅತ್ಯಂತ ಯಶಸ್ವಿ ಕ್ರೀಡೆಯಾಗಿದೆ. ಯುವಕರು ಕ್ರಿಕೆಟ್ ಜತೆಗೆ ಗ್ರಾಮೀಣ ಸೊಗಡಿನ ಕಬಡ್ಡಿ, ಖೋಖೊದಂತಹ ಕ್ರೀಡೆಗಳಲ್ಲಿ ಭಾಗವಹಿಸಿ ದೇಸಿಯ ಕ್ರೀಡೆಯನ್ನು ವಿಶ್ವಕ್ಕೆ ಪರಿಚಯಿಸುವಂಥ ಕ್ರೀಡಾಪಟುಗಳು ನೀವಾಗಬೇಕು ಎಂದು ಕ್ರೀಡಾಳುಗಳಿಗೆ ಕಿವಿಮಾತು ಹೇಳಿದ ಅವರು, ಕ್ರೀಡಾಳುಗಳ ಆಸಕ್ತಿ ಗುರುತಿಸಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಕ್ರೀಡಾಪಟುಗಳ ಪ್ರತಿಭೆ ಗುರುತಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಪರ್ಧಿಗಳು ಸೋಲು-ಗೆಲವಿನ ಲೆಕ್ಕಾಚಾರದ ಗೋಜಿಗೆ ಹೋಗದೆ, ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯ ಶರಣಪ್ಪ ಜಿಗಳೂರು ಮಾತನಾಡಿದರು. ಶರಣಪ್ಪ ಹಾದಿಮನಿ(ಮಿದ್ದಿ) ಕ್ರೀಡೆಗೆ ಚಾಲನೆ ನೀಡಿದರು. ಮುದಿಯಪ್ಪ ಹಾದಿಮನಿ, ಕಳಕಪ್ಪ ಉಳ್ಳಾಗಡ್ಡಿ, ಶರಣಪ್ಪ ರಾಠೋಡ, ಈರಣ್ಣ ಕಳ್ಳಿಗುಡ್ಡ, ಅಂಬರೇಶ ರಾಠೋಡ, ರಾಜಾಭಕ್ಷಿ ವಸ್ತಾದ ಮುಂತಾದವರು ಉಪಸ್ಥಿತರಿದ್ದರು.