ಬೃಹತ್ ಸಮುದಾಯ ಭವನ ಉದ್ಘಾಟನೆ ನಾಳೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 4
ಗದಗ ಜಿಲ್ಲೆಯಲ್ಲಿ 2ನೇ ದೊಡ್ಡ ಪಟ್ಟಣ ಎಂದು ಖ್ಯಾತಿ ಹೊಂದಿರುವ ಲಕ್ಷ್ಮೇಶ್ವರಕ್ಕೆ ಬೃಹತ್ ಸಮುದಾಯ ಭವನ (ಕಲ್ಯಾಣ ಮಂಟಪ)ದ ಕೊರತೆ ಕಾಡುತ್ತಿತ್ತು. ಇದನ್ನು ಮನಗಂಡು ಪಟ್ಟಣದಲ್ಲಿ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನ ನಿರ್ಮಾಣ ಕಾರ್ಯ 2004ರಲ್ಲಿ ಪ್ರಾರಂಭವಾಗಿ ಈಗ ಮುಕ್ತಾಯಗೊಂಡಿರುವ ಸಮುದಾಯ ಭವನದ ಉದ್ಘಾಟನೆ ನ. 6ರಂದು ನಡೆಯಲಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಹೇಳಿದರು.
ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ ಜನರ ನಿರೀಕ್ಷಗೆ ತಕ್ಕಹಾಗೆ ಯಾವುದೇ ಬೃಹತ್ ಸಭೆ ಸಮಾರಂಭವನ್ನು ಮಾಡಲು ಸಮುದಾಯ ಭವನ ಇರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಬೃಹತ್ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕುತ್ತಿರುವಾಗ ಪಟ್ಟಣದ ಕೆಇಬಿ ಎದುರುಗಿರುವ ಮುಕ್ತಿಮಂದಿರದ ಮಠಕ್ಕೆ ಸೇರಿದ ವಿಶಾಲವಾದ 2 ಎಕರೆ ಜಾಗೆ ಸೂಕ್ತ ಎಂದು ಕಂಡು ಬಂದಾಗ ರಂಭಾಪುರಿ ಪೀಠದ ಮೊರೆ ಹೋದೆವು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರ ತಂದೆ ಮಲ್ಲೇಶಪ್ಪ ಮಹಾಂತಶೆಟ್ಟರ್ ಅವರು ಮುಕ್ತಿಮಂದಿರದ ಹಿಂದಿನ ಪೀಠಾಧ್ಯಕ್ಷರಾಗಿದ್ದ ರಂಭಾಪುರಿ ಜ. ವೀರಗಂಗಾಧರ ಶ್ರೀಗಳಿಗೆ 1954-55ರಲ್ಲಿ 2 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು.
ಈ ಜಮೀನು ಸಮುದಾಯ ಭವನ ನಿರ್ಮಾಣಕ್ಕೆ ಯೋಗ್ಯವೆಂದು ಕಂಡು ಬಂದಾಗ ಮುಕ್ತಿಮಂದಿರದ ಶ್ರೀಗಳಿಂದ 1 ಎಕರೆ ಜಾಗ ಪಡೆದು ಬೃಹತ್ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಯಿತು. ಆಗ ರಂಭಾಪುರಿ ಪೀಠದ ಜ. ವೀರ ಸೋಮೇಶ್ವರ ಶ್ರೀಗಳು ಆಸಕ್ತಿ ವಹಿಸಿ ಸಮುದಾಯ ಭವನ ನಿರ್ಮಾಣಕ್ಕೆ 1 ಎಕರೆ ಭೂಮಿಯನ್ನು ಮುಕ್ತಿಮಂದಿರದ ಶ್ರೀಗಳಿಂದ ಬಿಡಿಸಿಕೊಡಿಸಲು ನೆರವಾದರು ಎಂದು ಹೇಳಿದರು.
ಆಗ ರೇಣುಕಾಚಾರ್ಯ ವಿಶ್ವಕಲ್ಯಾಣ ಟ್ರಸ್ಟ್ ರಚನೆ ಮಾಡಿ ಆ ಟ್ರಸ್ಟ್ನ ಅಡಿಯಲ್ಲಿ ಈ ಸಮುದಾಯ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.
ಪಟ್ಟಣದಲ್ಲಿ ಈಗ ಸಿದ್ಧಗೊಂಡಿರುವ ರಂಭಾಪುರಿ ಜ. ವೀರ ಗಂಗಾಧರ ಸಮುದಾಯ ಭವನವನ್ನು ರು. 1.50 ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿಸಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಈ ಭನವ ನಿರ್ಮಾಣಕ್ಕೆ ಸಂಸದ ರಾಜಶೇಖರ ಮೂರ್ತಿಯವರ ಬಯಲು ಸೀಮೆ ಅಭಿವೃದ್ಧಿ ನಿಧಿಯಿಂದ ರು. 25 ಲಕ್ಷ ಅನುದಾನ ಪಡೆದುಕೊಳ್ಳಲಾಗಿದೆ. ಪಟ್ಟಣದ ದಾನಿ ಈರಪ್ಪ ಆದಿ ಅವರಿಂದ ರು. 10 ಲಕ್ಷ ಹಾಗೂ ಇತರೆ ಶಾಸಕರು, ದಾನಿಗಳಿಂದ ಹಣವನ್ನು ಪಡೆದು ಈ ಬೃಹತ್ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆನಂದ ಮೆಕ್ಕಿ, ಎಸ್.ಎಸ್. ಬಾಳಿಹಳ್ಳಿಮಠ, ಆರ್.ಎಫ್. ಪುರಾಣಿಕಮಠ, ಪ್ರೊ. ಎನ್.ಎಸ್. ಪಾಟೀಲ, ಡಾ. ವೈ.ಎಫ್. ಹಂಜಿ, ಕುಬೇರಪ್ಪ ಮಹಾಂತಶೆಟ್ಟರ್, ಚನ್ನಪ್ಪ ಕೋಲಕಾರ, ಸೋಮಣ್ಣ ವಡಕಣ್ಣವರ, ಶಿವಲಿಂಗಪ್ಪ ಕಾಳಪ್ಪನವರ ಮುಂತಾದವರು ಉಪಸ್ಥಿತರಿದ್ದರು.