ಮನಸ್ಸಿನ ಒತ್ತಡ ಕಳೆಯಲು ಹಾಸ್ಯ ಅಗತ್ಯ
ಕನ್ನಡಪ್ರಭ ವಾರ್ತೆ, ನರಗುಂದ, ನ. 4
ಆಧುನಿಕ ಯುಗದಲ್ಲಿ ಮನುಷ್ಯ ಹಲವಾರು ಒತ್ತಡಗಳಿಂದ ಮಾನಸಿಕವಾಗಿ ದುರ್ಬಲನಾಗಿದ್ದಾನೆ. ಇಂತಹ ಮನುಷ್ಯನಿಗೆ ನಗು ಅವಶ್ಯವಾಗಿ ಬೇಕು ಎಂದು ಗದಗಿನ ಕೆ.ವಿ.ಎಸ್.ಆರ್. ಕಾಲೇಜಿನ ಪ್ರಾಧ್ಯಾಪಕ ಅನಿಲ್ ವೈದ್ಯ ಹೇಳಿದರು.
ಅವರು ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಏರ್ಪಡಿಸಿದ ಹಾಸ್ಯ ಸಂಜೆ ಹಾಗೂ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯ ದಿನನಿತ್ಯದ ಬದುಕಿನ ಜಂಜಾಟದಲ್ಲಿ ಒಂದಿಲ್ಲೊಂದು ಒತ್ತಡದಲ್ಲಿ ಬದುಕುತ್ತಿದ್ದಾನೆ. ಯಾವಾಗಲೂ ಮನಸ್ಸಿನ ಒತ್ತಡಗಳಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ಇದರಿಂದಾಗಿ ಮನುಷ್ಯನಿಗೆ ಹಲವು ಕಾಯಿಲೆಗಳು ಬರುತ್ತಿವೆ. ಇದರಿಂದಾಗಿ ದಿನನಿತ್ಯದ ಚಟುವಟಿಕೆಯಲ್ಲಿ ಅಲ್ಪ ಸಮಯವನ್ನಾದರೂ ಇಂತಹ ಹಾಸ್ಯ ಕೇಳಲು ನಿಗದಿಗೊಳಿಸಬೇಕು. ಅಂದಾಗ ಮಾತ್ರ ಜೀವನ ಸುಖಮಯವಾಗಿ ಕಳೆಯಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಪತ್ರಿವನ ಮಠದ ಸಿದ್ಧವೀರ ಶ್ರೀಗಳು ಮಾತನಾಡಿ, ನಮ್ಮವರು ಅನ್ಯ ಭಾಷೆಯ ಸಂಸ್ಕೃತಿ ಬಗ್ಗೆ ಗಮನ ಹರಿಸಿರುವುದರಿಂದಾಗಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಬರುತ್ತಿದೆ. ಹಾಗಾಗಿ ನಮ್ಮ ಭಾಷೆ, ಜಲ, ನೆಲಗಳಿಗೆ ಧಕ್ಕೆ ಬಂದಾಗ ನಾವು ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಬೆಳವಲನಾಡ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಗೌರವಾಧ್ಯಕ್ಷ ಪ್ರೊ. ಆರ್.ಎಚ್. ತಿಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ವಿ.ಎನ್. ಕೊಳ್ಳಿಯವರ, ಬಿ.ಎಸ್. ಹಣಜಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಡಿ.ಎಚ್. ಅಜ್ಜಿ, ಉಪಾಧ್ಯಕ್ಷ ಎಂ.ಬಿ. ವೇಲೂರ, ಶಿವಲೀಲಾ ಕೊಳ್ಳಿಯವರ, ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಮಾರುತಿ ಭೋಸಲೆ, ಎಸ್.ಕೆ. ಹಂದಿಗೋಳ, ಶಂಕರ ಕಲ್ಲಿಗನೂರ, ಎಂ.ಡಿ. ಮಾದರ, ಬಾಬಾ ಫಿರಂಗ, ಎಚ್.ಬಿ. ಅಸೂಟಿ, ಪಿ.ಬಿ. ಬಡಿಗೇರ, ಕೆ.ಎಂ. ಹಾದಿಮನಿ, ವಿಜಯಲಕ್ಷ್ಮೀ ಹಿರೇಮಠ, ಎಸ್.ಪಿ. ಹುಲಮನಿ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಹಲಕುರ್ಕಿ ಸ್ವಾಗತಿಸಿದರು. ಶಿವಾನಂದ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ. ಮಣ್ಣೂರಮಠ ವಂದಿಸಿದರು.