ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಸಕರಿಂದ ಪರಿಹಾರದ ಚೆಕ್ ವಿತರಣೆ

Vishwanath S
Updated On : 5 Nov 2013, 11:24 am

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಮಂಗಸೂಳಿ ರಾಜ್ಯ ಹೆದ್ದಾರಿ 73ನ್ನು ಅಭಿವೃದ್ಧಿ ಮತ್ತು ಅಗಲೀಕರಣ ಮಾಡುವ ಸಲುವಾಗಿ ಭೂಮಿ, ನಿವೇಶನ ಹಾಗೂ ಮನೆಗಳನ್ನು ಕಳೆದುಕೊಂಡ ಸಾರ್ವಜನಿಕರಿಗೆ ಸರ್ಕಾರದ ಪರಿಹಾರದ ಚೆಕ್‌ನ್ನು ಬುಧವಾರ ಸಂಜೆ ಶಾಸಕ ರಾಮಕೃಷ್ಣ ದೊಡ್ಡಮನಿ ವಿತರಿಸಿದರು. ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉಪ ವಿಭಾಗಾಧಿಕಾರಿ ಐ.ಜೆ. ಗದ್ಯಾಳ ಮಾತನಾಡಿ, ರಾಜ್ಯ ಹೆದ್ದಾರಿ ಅಗಲೀಕರಣ ಕಾರ್ಯದಲ್ಲಿ ಭೂಮಿ ಕಳೆದುಕೊಂಡ ಫಲಾನುಭವಿಗಳಿಗೆ ಸರ್ಕಾರ ಪರಿಹಾರವನ್ನು ನೀಡುತ್ತಿದೆ. ಈ ಹೆದ್ದಾರಿ ನಿರ್ಮಾಣದಲ್ಲಿ ಒಟ್ಟು 48 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸರಿಯಾದ ಹಾಗೂ ಎಲ್ಲ ದಾಖಲೆಗಳನ್ನು ನೀಡಿದ 14 ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಚೆಕ್ ವಿತರಿಸುವ ಕಾರ್ಯವನ್ನು ಇಂದು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯವನ್ನು ಶೀಘ್ರದಲ್ಲಿ ಮಾಡಲಾಗುವುದು. ಇದು ಮೊದಲ ಹಂತದ ಪರಿಹಾರ ವಿತರಣೆಯಾಗಿದ್ದು ಇನ್ನೊಂದು ಕಂತಿನ ಪರಿಹಾರದ ಹಣವನ್ನು ಸರ್ಕಾರ ನೀಡಿದ ತಕ್ಷಣ ನೀಡಲಾಗುತ್ತದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ಸಭೆಯಲ್ಲಿ ಬಸವರಾಜ ನೆಲವಿಗಿ, ಡಾ. ವೈ.ಎಫ್. ಹಂಜಿ, ಡಾ.ಜಿ.ಎಸ್. ಕೋಟಿಮಠ, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಎನ್. ಹೊಳಲಾಪುರ, ತಹಸೀಲ್ದಾರ್ ಆರ್.ಬಿ. ನಿಂಗನಗೌಡರ, ಉಪ ತಹಸೀಲ್ದಾರ್ ರಿತ್ತಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ ಇದ್ದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ ಸ್ವಾಗತಿಸಿ ವಂದಿಸಿದರು.     ರಾಜೇಂದ್ರ ಬಾಬು ನಿಧನ: ಗಣೇಶಸಿಂಗ್ ಸಂತಾಪ
ಗದಗ: ಕನ್ನಡ ಚಲನಚಿತ್ರದಲ್ಲಿ 50ಕ್ಕೂ ಹೆಚ್ಚೂ ಹಾಗೂ ಹಲವಾರು ಭಾಷೆಗಳ ಚಲನಚಿತ್ರಗಳ ನಿರ್ದೇಶಕರಾಜೇಂದ್ರ ಬಾಬು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿರುವುದಕ್ಕೆ ಮಹಾರಾಣ ಪ್ರತಾಪಸಿಂಹ ಶಿಕ್ಷಣ ಸಂಸ್ಥಾಪಕ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜೇಂದ್ರಬಾಬು ಅವರು ಪುಟ್ಟಣ್ಣ ಕಣಗಾಲ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಒಳಗೊಂಡು ಹಲವಾರು ಪ್ರಶಸ್ತಿ ಗಳಿಸುವುದರೊಂದಿಗೆ ಸಹಸ್ರಾರು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ. ಅವರ ನಿರ್ದೇಶನದ ಎಲ್ಲ ಕನ್ನಡ ಚಲನಚಿತ್ರಗಳ ಪ್ರಖ್ಯಾತಿ ಪಡೆದಿದ್ದು, ಇಂತಹ ನಿರ್ದೇಶಕನ ಅಗಲಿಕೆಯಿಂದ ಕನ್ನಡ ಚಲನಚಿತ್ರ ರಂಗ ಬಡವಾಗಿದೆ. ಅದಲ್ಲದೇ ಸಹಸ್ರಾರು ಅಭಿಮಾನಿಗಳಿಗೆ ತುಂಬಲಾರದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ನಾಡು, ನುಡಿ ಗೌರವಿಸಿ
ನರೇಗಲ್ಲ: ಪರಕೀಯರ ದಾಸ್ಯ ತೊಲಗಿದರೂ ಭಾಷಿಕವಾಗಿ ಇನ್ನೂ ಅವರ ಭಾಷೆ ಮೇಲಿನ ವ್ಯಾಮೋಹ ಕಡಿಮೆಯಾಗದಿರುವುದು ಕನ್ನಡಿಗರ ದೌರ್ಬಲ್ಯದ ಪ್ರತೀಕ. ಅದು ಕಡಿಮೆಯಾಗಿ ಪ್ರತಿಯೊಬ್ಬ ಕನ್ನಡಿಗನಲ್ಲಿ ಕನ್ನಡದ ವ್ಯಾಮೋಹ ಹೆಚ್ಚಾಗಬೇಕು ಎಂದು ಪಪಂ ಸದಸ್ಯ ಅಂದಪ್ಪ ಮಡಿವಾಳರ ಹೇಳಿದರು.ಸ್ಥಳೀಯ ಜಯಕರ್ನಾಟಕ ಸಂಘಟನೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕನ್ನಡ ಪ್ರತಿಯೊಬ್ಬರ ನುಡಿಯಾಗಿ ದೇಹದ ನಾಡಿಯಾಗಬೇಕು. ಇತರ ಭಾಷೆಗಳ ಕಲಿಕೆಗೆ ನಿರ್ಬಂಧವಿಲ್ಲ. ಆದರೆ, ಕನ್ನಡದ ತಿರಸ್ಕಾರ, ಕನ್ನಡದ ಪ್ರೀತಿಯಿಂದ ದೂರವಾಗುವ ಕನ್ನಡಿಗರ ಮನಸ್ಥಿತಿ ಬದಲಾಗಬೇಕು. ಕನ್ನಡ ಭಾಷಾ ಶಿಕ್ಷಣ ಕೇವಲ ನೆಪವಾಗದೇ ಅಚ್ಚ ಕನ್ನಡದ ಪ್ರೀತಿ ಜಾಗೃತವಾಗಬೇಕು ಎಂದರು. ಭಾಷೆಯ ಉಳಿವಿಗಾಗಿ ಕನ್ನಡ ನೆಲದ ಜನ ಆಂತರಿಕ ಕಚ್ಚಾಟಗಳಿಗೆ ತೆರೆಹಾಕಿ ಸಂಪ್ರದಾಯದಂತೆ ಕನ್ನಡ ಜಾಗೃತಿ ಕಾರ್ಯಕ್ರಮಗಳು ಜರುಗಬೇಕು ಎಂದರು. ಈ ಸಂದರ್ಭದಲ್ಲಿ ಪಪಂ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಖಾದರಭಾಷಾ ಹೂಲಗೇರಿ, ಪ್ರಭುಸ್ವಾಮಿ ಅರವಠಗಿಮಠ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಹುಲಗಪ್ಪ ಬಂಡಿವಡ್ಡರ, ಶೇಖಪ್ಪ ಜುಟ್ಲ, ಮೈಲಾರಪ್ಪ ಗೋಡಿ, ಕುಮಾರ ರಾಠೋಡ, ಅಂದಪ್ಪ ತೋಟಗೇರ, ಈರಣ್ಣ ಕಾಟಿ ಮುಂತಾದವರು ಉಪಸ್ಥಿತರಿದ್ದರು.
ಪಶ್ಚಿಮ ಪದವೀಧರ ಕ್ಷೇತ್ರ ಮತ್ತೆ ಕೈಗೆ ಮಡಿಲಿಗೆ: ಈಶ್ವರ
ನರಗುಂದ: ಗದಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ ಈ ಬಾರಿ ನಿಶ್ಚತವಾಗಿ ಮತ್ತೆ ಕಾಂಗ್ರೆಸ್ ಮಡಿಲಿಗೆ ಬರುವುದು ಖಂಡಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಟಿ. ಈಶ್ವರ ಹೇಳಿದರು. ಪಟ್ಟಣದ ಆಯಿಲ್ ಮಿಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕ್ಷೇತ್ರದ ಪ್ರತಿನಿಧಿಯಾಗಿ ಎಚ್.ಕೆ. ಪಾಟೀಲ ಸಾಕಷ್ಟು ಕೆಲಸ ಮಾಡಿದ್ದಾರೆ.ಹಿಂದಿನ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲಬೇಕಾಯಿತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನೇ ಸ್ಪರ್ಧಿಸುತ್ತೇನೆ. ಮೊದಲನೇ ಹಂತದಲ್ಲಿ 16 ಸಾವಿರ ಪದವೀಧರರ ಮತಗಳ ನೋಂದಾವಣೆ ಮಾಡಲಾಗಿದೆ ಎಂದರು. ಈ ಸಂದರ್ಭ ಚಂಬಣ್ಣ ವಾಳದ, ಡಾ. ಸಂತೋಷ ಯಾವಗಲ್, ಎಸ್.ಆರ್. ಪಾಟೀಲ, ವಂಕರಡ್ಡಿ ದೇವರಡ್ಡಿ, ಡಾ. ಎಲ್.ಎಚ್. ಕರಮಡಿ, ಶಿವನಗೌಡ ಹೆಬ್ಬಳ್ಳಿ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಸಿ, ಎಸ್.ಬಿ. ದಂಡಿನ, ಗುರುಪಾದಪ್ಪ ಕುರಹಟ್ಟಿ, ಡಿ.ಎಸ್. ಪಾಟೀಲ, ಗುರುಶಾಂತ ದೊಡ್ಡಮನಿ, ರವಿ ಯರಗಟ್ಟಿ, ರಾಮಚಂದ್ರ ಪವಾರ, ದ್ಯಾಮಣ್ಣ ಸವದತ್ತಿ ಮುಂತಾದವರು ಹಾಜರಿದ್ದರು.
ನಾಳೆ ಪೂರ್ವಭಾವಿ ಸಭೆ
ಗದಗ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣದ ನಿಮಿತ್ತ ಡಿಸೆಂಬರ್ 6ರಂದು ಚೈತನ್ಯಭೂಮಿ ದರ್ಶನಕ್ಕಾಗಿ ಮುಂಬೈ ದಾದರ ಚಲೋ ಕಾರ್ಯಕ್ರಮವನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಜ್ಞಾನ ಪ್ರಸಾರ ಕೇಂದ್ರ ಸಮಿತಿ ಗದಗ, ಸಮತಾ ಸೈನಿಕ ದಳ ಗದಗ ಜಿಲ್ಲೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಗದಗ ತಹಸೀಲ್ದಾರ್ ಕಚೇರಿ ಎದುರಿಗಿನ ನಗರಸಭೆ ಉದ್ಯಾನದಲ್ಲಿ ನ. 6ರ ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಜಿಲ್ಲೆಯ ಸಮಸ್ತ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಆಗಮಿಸಬೇಕೆಂದು ವೆಂಕಟೇಶ ಬೇಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಲಪ್ಪ ಮಾದರ ನೇಮಕ
ರೋಣ: ಬಿಜೆಪಿ ರೋಣ ಎಸ್.ಸಿ. ಮೋರ್ಚಾ ಅಧ್ಯಕ್ಷರನ್ನಾಗಿ ತಾಲೂಕಿನ ಹೊಸಹಳ್ಳಿ ಗ್ರಾಮದ ಮಲ್ಲಪ್ಪ ಮಾದರ ಅವರನ್ನು ನೇಮಿಸಲಾಗಿದೆ ಎಂದು ಪಕ್ಷದ ರೋಣ ವಿಧಾನಸಭಾ ಮತಕ್ಷೇತ್ರದ ಅಧ್ಯಕ್ಷ ಸೋಮಶೇಖರ ಚನ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಣ್ಣಯಲ್ಲಪ್ಪ ನಿಧನ
ಲಕ್ಷ್ಮೇಶ್ವರ: ಸಮೀಪದ ರಾಮಗೇರಿ ಗ್ರಾಮದ ಹಿರಿಯ ಮುಖಂಡ ಸಣ್ಣಯಲ್ಲಪ್ಪ ಬೆಟಗೇರಿ(85) ಭಾನುವಾರ ನಿಧನ ಹೊಂದಿದರು. ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಶಾಸಕ ರಾಮಕೃಷ್ಣ ದೊಡ್ಡಮನಿ, ಕೆಎಂಎಫ್ ನಿರ್ದೇಶಕ ಎಸ್.ಪಿ. ಪಾಟೀಲ, ತಾಪಂ ಸದಸ್ಯ ಚನ್ನಪ್ಪ ಜಗಲಿ ಸೇರಿದಂತೆ ಅನೇಕ ಮುಖಂಡರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶಿವಮ್ಮ ಹಕ್ಕಂಡಿ
ಮುಂಡರಗಿ: ಪಟ್ಟಣದ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರಾದ ಶಿವಮ್ಮ ಹಕ್ಕಂಡಿ(91) ಭಾನುವಾರ ರಾತ್ರಿ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ: ಶಿವಮ್ಮನವರ ನಿಧನಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ರಜನೀಕಾಂತ ದೇಸಾಯಿ, ಬಸವಂತಪ್ಪ ಮುದ್ದಿ, ಕೊಟ್ರಗೌಡ ಪಾಟೀಲ, ಹಾಲಪ್ಪ ದೇಸಾಯಿ, ಎಸ್.ವಿ. ಪಾಟೀಲ, ಅಶೋಕ ಹಂದ್ರಾಳ, ಬಿ.ಕೆ. ಪಾಟೀಲ, ಗಿರೀಶಗೌಡ ಪಾಟೀಲ, ಬಸವರಾಜ ನವಲಗುಂದ, ಅಂದಾನಗೌಡ ಕುಲಕರ್ಣಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement