ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶ್ರದ್ಧಾ-ಭಕ್ತಿಯಿಂದ ಆಚರಣೆ

Vishwanath S
Updated On : 5 Nov 2013, 11:22 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 4
ಭಾರತೀಯ ಹಬ್ಬಗಳಲ್ಲಿ ಅತ್ಯಂತ ವೈಶಿಷ್ಟತೆ ಹೊಂದಿದ, ಅಜ್ಞಾನದ ಕತ್ತಲೆ ತೊಲಗಿಸಿ ಜ್ಞಾನದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪೌರಾಣಿಕ ಹಿನ್ನೆಲೆ ಹೊಂದಿದ ದೀಪಾವಳಿಯ 3ನೇ ದಿನವಾದ ಬಲಿಪಾಡ್ಯಮಿಯಂದು ಬಲಿ ಚಕ್ರವರ್ತಿಯ ಅಟ್ಟಹಾಸಕ್ಕೆ ವಿಷ್ಣು, ವಾಮನ ಅವತಾರ ತಾಳಿ ಬಲಿ ಚಕ್ರವರ್ತಿಯನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಜಯದ ಸಂಕೇತವಾಗಿ ಆಚರಿಸುವ ಈ ಹಬ್ಬ ಮಹತ್ವ ಪಡೆದುಕೊಂಡಿದೆ.
ಸ್ಥಳೀಯ ಲಂಬಾಣಿ ಜನಾಂಗ ಮಹಿಳೆಯರು ಬಲಿಪಾಡ್ಯದಂದು ಹೊಲಗಳಿಗೆ ತೆರಳಿ ಚೆಂಡು ಹೂವು, ಹಣ್ಣಿ ಹೂವು, ಉತ್ರಾಣಿ ಗಿಡಗಳನ್ನು ತಂದು ಬಡಾವಣೆಯ ಶ್ರೀಸೇವಾಲಾಲ ಮಂದಿರದಲ್ಲಿ ಸಾಂಪ್ರದಾಯಕ ಹಾಡಿನೊಂದಿಗೆ ಹಾಡಿ ಕುಣಿದು ಕುಪ್ಪಳಿಸಿದರು. ಬಳಿಕ ಜನಾಂಗದ ಎಲ್ಲ ಬಂಧುಗಳ ಮನೆ ಮನೆಗೆ ತೆರಳಿ ತಾವು ತಂದ ಪುಷ್ಪಗಳನ್ನು ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಇನ್ನೊಂದೆಡೆ ಪಟ್ಟಣದ ಮಹಿಳೆಯರು ಬಲಿಪಾಡ್ಯದ ಬೆಳಗಿನ ಜಾವ ಮನೆಯ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ರಂಗು ರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ ಬಾಗಿಲ ಬಳಿ ಚೆಂಡು ಹೂವು ಜತೆ ಉತ್ರಾಣಿ ಕಡ್ಡಿಯಿಂದ ಮಾಡಿದ ಪಾಂಡವರ ಕುಂಡಲಿ ಪೂಜೆ ನೆರವೇರಿಸಿದರು.
ಹಬ್ಬದ ಪ್ರಯುಕ್ತ ಚಿನ್ನ ಖರೀದಿ ಮಾಡಿದರೆ ಒಳ್ಳೆಯದೆಂಬ ನಂಬಿಕೆ. ಹೀಗಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಜೋರಾಗಿತ್ತು. ಅಲ್ಲದೆ ಟಿವಿ, ಫ್ರೀಜ್, ವಾಹನದಂತಹ ಗೃಹಪಯೋಗಿ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದು ಕಂಡು ಬಂತು.
ವರ್ಷಪೂರ್ತಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆದು ವ್ಯವಹಾರದಲ್ಲಿ ಲಾಭ ತರಲೆಂದು ಆಶಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ದೀಪಾಲಂಕಾರಗಳಿಂದ ಶೃಂಗರಿಸಿ ಶ್ರದ್ಧಾ, ಭಕ್ತಿಯಿಂದ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement