ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಭ್ರಮದ ದೀಪಾವಳಿ ಆಚರಣೆ

Vishwanath S
Updated On : 5 Nov 2013, 11:22 am

ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 4
ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಹಾಗೂ ಸೋಮವಾರ ವ್ಯಾಪಾರಸ್ಥರು, ಸಾರ್ವಜನಿಕರು ತಮ್ಮ ತಮ್ಮ ಅಂಗಡಿ, ಮನೆಗಳಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಆಚರಿಸಿದರು.
ಭಾನುವಾರ ಬೆಳಗ್ಗೆಯಿಂದಲೆ ಲಕ್ಷ್ಮೀ ಪೂಜೆಗೆ ಹಣ್ಣು, ಕಬ್ಬು, ಬಾಳೆ ದಿಂಡು, ಹೂವು, ಸಿಹಿ ತಿಂಡಿಗಳು ಹಾಗೂ ದೀಪ ಹಚ್ಚುವುದಕ್ಕಾಗಿ ಕೆಂಪು ಮಣ್ಣಿನಿಂದ ತಯಾರಿಸಿದ ವಿವಿಧ ವಿನ್ಯಾಸ, ಆಕಾರಗಳ ಪಣತಿಗಳ ಖರೀದಿಯಲ್ಲಿ ಜನರು ನಿರತರಾಗಿದ್ದರು.
ಕೆಲವು ವ್ಯಾಪಾರಸ್ಥರು ಶನಿವಾರ ರಾತ್ರಿಯೇ ಪೂಜೆ ಮಾಡಿದರೆ ಬಹುತೇಕ ಜನ ವ್ಯಾಪಾರಸ್ಥರು ಹಾಗೂ ಮನೆಗಳಲ್ಲಿ ಭಾನುವಾರ ರಾತ್ರಿಯೇ ಹೆಚ್ಚು ಲಕ್ಷ್ಮಿ ಪೂಜೆ ಮಾಡುತ್ತಿರುವ ದೃಶ್ಯ ಕಂಡು ಬಂದಿತು. ಮತ್ತೆ ಕೆಲವು ಅಂಗಡಿಗಳು ಹಾಗೂ ಎಪಿಎಂಸಿ ವರ್ತಕರು ಸೋಮವಾರ ಬೆಳಗ್ಗೆ ಪಾಡ್ಯದ ದಿನವೂ ಲಕ್ಷ್ಮೀ ಪೂಜೆ ಮಾಡಿದ್ದು ಕಂಡುಬಂದಿತು.
ದೀಪಾವಳಿ ಅಮಾವಾಸ್ಯೆ ಮರುದಿನ ಸೋಮವಾರ(ಪಾಡ್ಯ) ದಿನದಂದು ಬೆಳಗ್ಗೆ ಮಹಿಳೆಯರು ತಮ್ಮ ಮನೆಗಳ ಮುಂದೆ ಸಗಣಿಯಿಂದ ಮಾಡಿದ ಪಾಂಡೂರಗಳಿಗೆ ಪೂಜೆ ಮಾಡಿ ಅವುಗಳಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಅವುಗಳಿಗೆ ಶಾವಿಗೆ ಪಾಯಸದ ಎಡೆ ಮಾಡಿದ್ದು ಎಲ್ಲೆಡೆ ಕಂಡು ಬಂದಿತು. ಪಟ್ಟಣದಲ್ಲಿ ಸಂಜೆ ಮನೆಯ ಮುಂದಿನ ಎಲ್ಲ ಪಾಂಡೂರಗಳನ್ನು ಮಾಳಿಗೆ ಮೇಲಿನ ಕುಂಬಿಗಳ ಮೇಲೆ ಹಾಗೂ ಗೋಡೆಗಳ ಮೇಲೆ ಇಡುತ್ತಿರುವ ದೃಶ್ಯ ಕಂಡು ಬಂದಿತು.
ದೀಪಾವಳಿ ಎಂದರೆ ಎಲ್ಲೆಡೆ ಇಸ್ಪೀಟ್(ಜೂಜು) ಆಡುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ. ಆದರೆ, ಪ್ರಸ್ತುತ ದೀಪಾವಳಿಯಲ್ಲಿ ಎಲ್ಲಿಯೂ ಬಹಿರಂಗವಾಗಿ ಸಾರ್ವಜನಿಕರು ಇಸ್ಪೀಟ್(ಜೂಜಾಟ) ಆಡದಂತೆ ಮುಂಡರಗಿ ನೂತನ ಸಿಪಿಐ ಶ್ರೀಪಾದ ಜಲ್ಜೆ ಇದಕ್ಕೆ ತಡೆ ನೀಡಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ತಮ್ಮ ವಾಹನದ ಮೂಲಕ ಬಹಿರಂಗಾಗಿ ಯಾರು ಇಸ್ಪೀಟ್ ಆಡದಂತೆ ಪ್ರಚಾರ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ, ಸೋಮವಾರ ಮುಂಡರಗಿಯಲ್ಲಿ ಎಲ್ಲಿಯೂ ಬಹಿರಂಗವಾಗಿ ಇಸ್ಪೀಟ್ ಆಡಿದ ದೃಶ್ಯ ಕಾಣಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement