ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೂರ್ಯಕಾಂತಿಗೆ ವೈರಸ್

Vishwanath S
Updated On : 5 Nov 2013, 11:22 am

ನರೇಗಲ್ಲ: ಅತಿವೃಷ್ಟಿ, ಅನಾವೃಷ್ಟಿ, ಕಳಪೆ ಬೀಜದಿಂದ ಬೆಳೆ ಹಾನಿಗೊಳಗಾಗಿದ್ದ ರೈತರಿಗೆ ವೈರಸ್ ಕಾಟ ಎದುರಾಗಿದೆ. ಉತ್ತಮವಾಗೇ ಬೆಳೆದಿದ್ದ ಸೂರ್ಯಕಾಂತಿಗೆ ವೈರಸ್ ತಗುಲಿದ್ದು, ಬೆಳೆಯನ್ನೇ ಕಿತ್ತೆಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
2 ವರ್ಷ ಮಳೆಯಾಗದೇ ಕಂಗಾಲಾಗಿದ್ದ ರೈತನ ಮುಖದಲ್ಲಿ ಈ ಬಾರಿ ವರುಣನ ಕೃಪೆಯಿಂದ ಮಂದಹಾಸ ಮೂಡಿತ್ತು. ಇಂದರಿಂದ ರೈತ ಸೂರ್ಯಕಾಂತಿ ಬೆಳೆ ಬೆಳೆದಿದ್ದ. ಪೈರಿಗೆ ನಂಜಾಣುರೋಗ ತಗಲಿ ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗಿ ಗಿಡ ಬಾಡುತ್ತ ಹೊರಟಿದೆ. ಅಲ್ಲೊಂದು ಇಲ್ಲೊಂದು ಗಿಡಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ರೋಗ ಪರಾಗ ಸ್ಪರ್ಷದಿಂದ ಕ್ರಮೇಣ ಎಲ್ಲದಕ್ಕೂ ಹರಡಿ ಬೆಳೆ ಹಾನಿಯಾಗುವ ಆತಂಕ ಮನೆಮಾಡಿದೆ.
ರೈತರ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಪೈರುಗಳಿಗಂಟಿದ ನಂಜಾಣು ರೋಗವನ್ನು ಹತೋಟೆಗೆ ತರಲು ರೋಗಬಾಧಿತ ಪೈರುಗಳನ್ನು ಕಿತ್ತುಹಾಕಿ ಸುಡಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿ ಶ್ರಮವಹಿಸಿ ಬಿತ್ತಿ ಬೆಳೆದ ಪೈರುಗಳನ್ನು ಕಿತ್ತು ಹಾಕಲು ಮನಸ್ಸು ಬರುತ್ತಿಲ್ಲ. ಇದರಿಂದ ಇಡೀ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೊಲದಿಂದ ಹೊಲಕ್ಕೆ ವ್ಯಾಪಿಸಿ ಎಲ್ಲ ರೈತರ ಬೆಳೆಯೂ ನಾಶವಾಗುವ ಆತಂಕ ಎದುರಾಗಿದೆ.
ರೋಗದ ಲಕ್ಷಣಗಳು...
ನಗರದಲ್ಲಿ ಹಲವು ರೈತರ ಹೊಲಗಳಲ್ಲಿ ಈ ರೋಗ ಕಂಡು ಬಂದಿದ್ದು, ನಂಜಾಣುರೋಗ ತಗಲಿದ ಸೂರ್ಯಕಾಂತಿ ಪೈರಿನ ಎಲೆಯ ಬಣ್ಣ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣವಾಗಿ ಎಲೆ ಬಾಡುತ್ತಾ ಹೋಗುತ್ತದೆ. ಪೈರಿನ ಬುಡ ಕೊಳೆತು ಸುಟ್ಟಿರುವಂತೆ ಕಾಣುತ್ತದೆ ಮಣ್ಣಿನಲ್ಲಿ ವೈರಸ್‌ಗಳು ಕಾಣಿಸಿಕೊಂಡು ಒಂದು ಗಿಡಕ್ಕೆ ಅಂಟಿದ ರೋಗ ಗಾಳಿಯಿಂದ ಇನ್ನೊಂದು ಬೆಳೆಗೆ ವ್ಯಾಪಿಸಿ ಎಲ್ಲ ಬೆಳೆಗಳನ್ನು ನಾಶ ಪಡಿಸುತ್ತದೆ. ಇದರಿಂದ ಸಮೃದ್ಧವಾಗಿ ಬೆಳೆದ ಬೆಳೆ ಕಳೆದುಕೊಳ್ಳಬೇಕಾಗುತ್ತದೆ.
ಇಂತಹ ನಂಜಾಣುರೋಗ ಹರಡದಂತೆ ಹೊಲದ ಸುತ್ತಲೂ ನಾಲ್ಕು ಸಾಲು ಜೋಳವನ್ನು ಬಿತ್ತನೆ ಮಾಡಿದ ನಂತರ ಇತರೆ ಬೆಳೆಯನ್ನು ಬೆಳೆಯಬೇಕು. ಇದರಿಂದ ಗಾಳಿಯಿಂದ ಬರುವ ವೈರಸ್ಸನ್ನು ತಡೆಯಬಹುದು. ಜತೆಗೆ ವೈರಸ್ಸುಗಳು ಬೇಗನೇ ಅಂಟಿಕೊಳ್ಳಲು ಸಹಾಯ ಮಾಡುವ ಕಾಂಗ್ರೆಸ್ ಕಸ ಬೆಳೆಯದಂತೆ ನೋಡಿಕೊಳ್ಳಬೇಕು. ನಂಜಾಣುರೋಗ ಅಂಟಿದ ತಕ್ಷಣ ಅಂತಹ ಪೈರನ್ನು ಕಿತ್ತು ಸುಟ್ಟುಹಾಕಬೇಕು. ರೋಗಬಾಧೆ ಕಂಡುಬಂದ ಪೈರನ್ನು ಕಿತ್ತು ಹಾಕಿದ ಸ್ಥಳದಲ್ಲಿ ಮತ್ತು ಬೆಳೆಗೆ ನಂಜಾಣುರೋಗ ಬಾರದಂತೆ ಇಮ್‌ಡೋಕ್ಲೋಪಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ 25 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಇದರಿಂದ ವೈರಸ್ ರೋಗವನ್ನು ತಡೆಯಬಹುದು
- ಪ್ರಕಾಶ ಚವಡಿಯವರ, ಕೃಷಿ ಅಧಿಕಾರಿ
ಏನ್ ಮಾಡುದ್ರೀ ಬಿತ್ತಾಕ, ಬೀಜ ಗೊಬ್ರಕ್ಕ ಎಕರೆಗೆ ರು. 2500ದಂಗ ಖರ್ಚಮಾಡಿ ಏಳ ಎಕ್ಕರೆ ಬಿತ್ತೂನಿ. ಈ ರೋಗ ದಿನದಿಂದ ದಿನಕ್ಕ ಹೆಚ್ಚಾಗಾಕತ್ತೈತಿ, ಗಿಡಾ ಎಲ್ಲಾ ಕೀಳಬೆಕನ್ನಾಕತ್ತಾರ, ಬೆಳದನಿಂತ ಗಿಡಾ ಕೀಳಾಕ ಕಣ್ಣೀರ ಬರತ್ರಿ ಏನ ಮಾಡಬೇಕು ಒಂದು ತಿಳಿದಂಗಾಗೈತಿ.
- ಚನ್ನಬಸಪ್ಪ ಸಂಕನೂರ, ಕುಬೇರ ಜೋಗಿ, ಸೂರ್ಯಕಾಂತಿ ಬೆಳೆದ ರೈತರು


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement