ಇತಿಹಾಸ ವರ್ತಮಾನಕ್ಕೆ ದಾರಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 5
ಇಂದಿನ ವಿದ್ಯಾರ್ಥಿಗಳು ರಾಷ್ಟ್ರದ, ರಾಜ್ಯದ, ಜಿಲ್ಲೆಯ, ಗ್ರಾಮಗಳ ಐತಿಹಾಸಿಕ, ಸಾಂಸ್ಕೃತಿಕ ಇತಿಹಾಸವನ್ನು ಅಧ್ಯಯನ ಮಾಡಬೇಕು. ಇತಿಹಾಸ ವರ್ತಮಾನಕ್ಕೆ ದಾರಿ ತೋರಿಸುತ್ತದೆ ಎಂದು ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಪ್ರಾಧ್ಯಾಪಕ ಆರ್.ಎಲ್.ಪೊಲೀಸ್‌ಪಾಟೀಲ ಹೇಳಿದರು.
ತಾಲೂಕಿನ ಮೇವುಂಡಿಯ ಶಾಂತಾಬಾಯಿ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾದರೆ ಗತಕಾಲವನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ವಿವಿಧ ಕ್ಷೇತ್ರಗಳ ಪರಿಚಯ ಅಗತ್ಯ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆಗಳ ಉಚ್ಚಾರಣೆ ಸರಿಯಾಗಿ ಬರುತ್ತಿಲ್ಲ. ಈ ಸಮಸ್ಯೆ ಪದವಿಪೂರ್ವ, ಪದವಿ ಹಂತಗಳಲ್ಲಿಯೂ ತೀವ್ರವಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಭಾಷೆಯ ಸ್ಪಷ್ಟ ಉಚ್ಚಾರ ಹಾಗೂ ಬರಹವನ್ನು ತೀವ್ರ ಕಾಳಜಿಯಿಂದ ಕಲಿಸಬೇಕಾದ ಅವಶ್ಯಕತೆಯಿದೆ ಎಂದರು.
ಗ್ರಾಪಂ ಅಧ್ಯಕ್ಷ ಹಲನಗೌಡ ಅಮರಗೋಳ, ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶರಣು ಗೋಗೇರಿ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹನುಮಂತ ಕುಸುಲಾಪುರ, ವಿ.ಡಿ. ಶಿರಗುಂಪಿ, ಎನ್.ಎಂ. ಚಿತ್ರಗಾರ ಮುಂತಾದವರು ಇದ್ದರು.
ಹಾಲವ್ವ ಚಿಕ್ಕೆನಕೊಪ್ಪ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಲ್.ಎಚ್. ಎಣ್ಣಿ ಸ್ವಾಗತಿಸಿದರು. ಬಿ.ಬಿ. ಬೆನಕನವಾರಿ ನಿರೂಪಿಸಿದರು. ಪಿ.ಆರ್.ನಡುವಿನಹಳ್ಳಿ ವಂದಿಸಿದರು.