ಉತ್ತಮ ಸಾಧನೆಗೆ ಛಲ ಅಗತ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 5
ಹುಟ್ಟು-ಸಾವಿನ ನಡುವೆ ನಮ್ಮಿಂದ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಮಹತ್ವಾಕಾಂಕ್ಷೆ ಇರಬೇಕು. ಇಲ್ಲವಾದಲ್ಲಿ ನಮ್ಮ ಹುಟ್ಟಿಗೆ ಹಾಗೂ ಅಸ್ತಿತ್ವಕ್ಕೆ ಬೆಲೆ ಇರುವುದಿಲ್ಲ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ತಿಕೇರಿ ಓಣಿಯಲ್ಲಿ ಮಂಗಳವಾರ ಶಾಂಭವಿ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇವಸ್ಥಾನಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯವನ್ನು ಮಾಡಬೇಕು. ನಾವು ಮಾನಸಿಕವಾಗಿ ಜರ್ಜಿರಿತರಾದಾಗ ದೇವರ ಸ್ಮರಣೆಯಿಂದ ಮನಸ್ಸಿನ ಕ್ಲೇಶಗಳನ್ನು ಕಳೆದುಕೊಳ್ಳಲು ಸಾಧ್ಯ. ಅದಕ್ಕಾಗಿ ದೇವಸ್ಥಾನಗಳು ಉತ್ತಮ ಸಮಾಜದ ಕನ್ನಡಿಯಾಗಿವೆ. ನಮಗೆ ಜನ್ಮ ನೀಡಿದ ತಂದೆ ತಾಯಿಗಳು ನಿಜವಾದ ದೇವರಾಗಿದ್ದು, ಮುಪ್ಪಿನ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ನಿಜವಾದ ದೈವ ಭಕ್ತಿಯಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಎಲ್ಲಿ ಧಾರ್ಮಿಕ ಶಾಂತಿ ನೆಲೆಸಿದಯೋ ಆ ದೇಶ ಹಾಗೂ ಸಮಾಜ ನೆಮ್ಮದಿಯಿಂದ ಬಾಳಲು ಸಾಧ್ಯ. ದೇವಸ್ಥಾನಗಳು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುವ ಕಾರ್ಯವನ್ನು ಮಾಡುತ್ತವೆ ಎಂದರು.
ಪಟ್ಟಣದ ಕರೆವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಸೋಮಣ್ಣ ಮುಳಗುಂದ, ಶಿವಣ್ಣ ಕೋಳಿವಾಡ, ಶಂಕ್ರಪ್ಪ ಬೊಮ್ಮನಳ್ಳಿ ಮುಂತಾದವರು ಮಾತನಾಡಿದರು.
ಸಮಾರಂಭದಲ್ಲಿ ಚೆಂಬಣ್ಣ ಬಾಳಿಕಾಯಿ, ಬಸವಂತಪ್ಪ ಮಜ್ಜಿಗುಡ್ಡ, ಬಸವಣ್ಣಪ್ಪ ಮಡಿವಾಳರ, ಪುರಸಭೆ ಸದಸ್ಯ ಗುರುರಾಜ ಮೆಡ್ಲೇರಿ, ಗಂಗಾಧರ ರಾಜೋಳಿ, ಚೆಂಬಣ್ಣ ಗುರಿಕಾರ ಹಾಗೂ ಶಾಂಭವಿ ಯುವಕ ಮಂಡಳದ ಸದಸ್ಯರು ಹಾಜರಿದ್ದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.