ಕಾಯಕದಲ್ಲಿ ಮೇಲು-ಕೀಳಿಲ್ಲ
ಮುಂಡರಗಿ: ನಮ್ಮ ಮುಖ ಹಾಗೂ ತಲೆಯನ್ನು ಸ್ವಚ್ಛಗೊಳಿಸುವ ಕ್ಷೌರಿಕರು, ನಮ್ಮ ಕೊಳಕಾದ ಬಟ್ಟೆಗಳನ್ನು ಶುಭ್ರಗೊಳಿಸುವ ಮಡಿವಾಳರು, ಕಸ ಗುಡಿಸುವ ಕಾರ್ಮಿಕರು, ಇವರ್ಯಾರು ತಮ್ಮ ಕಾಯಕ ಕೀಳೆಂದು ತಿಳಿಯಬಾರದು. ಕಾಯಕದಲ್ಲಿ ಮೇಲು-ಕೀಳು ಇಲ್ಲ ಎನ್ನುವುದನ್ನು ಎಲ್ಲರೂ ಅರಿತು ನಡೆಯಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಮಂಗಳವಾರ ಮುಂಡರಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಿವು ಲಕ್ಕಿ ಮೆನ್ಸ್ ಪಾರ್ಲರ್, ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಾಜ, ಗದಗ ಜಿಲ್ಲಾ ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಕಲಚೇತನ ಹಾಗೂ ಅಂಗವಿಕಲರ ಉಚಿತ ಕ್ಷೌರ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವು ಹಡಪದ ಹಾಗೂ ವೃತ್ತಿ ಬಾಂಧವರು ತಮ್ಮ ನಿತ್ಯ ಕ್ಷೌರ ಮಾಡುವ ಕಾಯಕದ ಜೊತೆಗೆ ಅಂಗವಿಕಲ ಹಾಗೂ ವಿತಲಚೇತನರಿಗಾಗಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉಚಿತವಾಗಿ ಕ್ಷೌರ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಲ್ಲರೂ ಮೆಚ್ಚುವಂತದ್ದು. ನಾವು ಮಾಡುವ ಕಾಯಕದಲ್ಲಿ ದಾಸೋಹಕ್ಕಾಗಿ ಹಾಗೂ ಇಂತಹ ಪರೋಪಕಾರಿ ಮತ್ತು ಕೆಳ ಮಟ್ಟದಲ್ಲಿರುವವರ ಸೇವೆಗಾಗಿ ಒಂದಿಷ್ಟು ವಿನಿಯೋಗಿಸುವುದರಿಂದ ನಾವು ಮಾಡಿದ ಕಾಯಕ ಸಾರ್ಥಕವಾಗುತ್ತಿದೆ ಎಂದರು.
ಮುಂಬರುವ ದಿನಗಳಲ್ಲಿ ತಾಲೂಕು ಹಡಪದ ಅಪ್ಪಣ್ಣ ಸೇವಾ ಸಮಾಜದ ಸಮುದಾಯ ಭವನಕ್ಕೆ ಜಾಗೆಯನ್ನು ಕೊಡಿಸುವುದರ ಜೊತೆಗೆ ತಮ್ಮ ಅನುದಾನದಲ್ಲಿ ಧನ ಸಹಾಯವನ್ನೂ ಮಾಡುವುದಾಗಿ ತಿಳಿಸಿದರು.
ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಪರೋಪಕಾರಿಯಾಗಿ ಕೆಲಸ ಮಾಡಬೇಕು. ಶಿವು ಲಕ್ಕಿ ಮೆನ್ಸ್ ಪಾರ್ಲರ್ನಿಂದ ಸಾರ್ವಜನಿಕ ಸೇವೆಗಳು ನಡೆಯುತ್ತಲೇ ಇವೆ. ಇವರು ಪ್ರತಿವರ್ಷ ಗದುಗಿನ ಪುಟ್ಟರಾಜರ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಅಲ್ಲಿನ ಎಲ್ಲ ಅಂದರಿಗೂ ಉಚಿತವಾಗಿ ಕ್ಷೌರ ಮಾಡುವ ಮೂಲಕ ತಮ್ಮ ಸೇವೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನ ಭಾರತಿ ಮಹಾಸ್ವಾಮೀಜಿ ಮಾತನಾಡಿ, ನಾವು ಮಾಡುವ ಕಾಯಕ ನಮ್ಮ ಮನೆಗಷ್ಟೇ ಸೀಮಿತವಾಗಿರದೇ, ಇತರೇ ಜನರಿಗೂ ಸಹಾಯ ಮಾಡುವ ಉದ್ದೇಶ ಇರಬೇಕು ಎಂದು ಹೇಳಿದರು.
ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಜಿಲ್ಲಾ ಹಡಪದ ಸಮಾಜದ ಗೌರವಾಧ್ಯಕ್ಷ ಮೋಹನ್ ಚಂದಪ್ಪನವರ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಕೊಣ್ಣೂರ, ಮುಂಡರಗಿ ತಾಲೂಕಾಧ್ಯಕ್ಷ ದೇವು ಹಡಪದ, ಮಂಜುನಾಥ ಇಟಗಿ ಮಾತನಾಡಿದರು.
ಎಂ.ಎನ್. ಬೆಳಗಟ್ಟಿ, ಡಾ. ಫಕ್ಕೀರಪ್ಪ ನರೇಗಲ್, ಪ್ರೊ. ಎಸ್.ಬಿ. ಕರಿಭರಮಗೌಡ್ರ, ಶಂಕ್ರಪ್ಪ ಬಾರಿಕಾಯಿ, ಚಂದ್ರಶೇಖರ ಹಡಪದ, ಸುರೇಶ ಹಡಪದ, ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ, ಶೇಖರಾಜ ಹೊಸಮನಿ, ಪಾಲಾಕ್ಷಿ ಗಣದಿನ್ನಿ, ಶಂಕ್ರಪ್ಪ ಹಡಪದ, ಮಹೇಶ ಹಡಪದ, ಮಂಜು ಹಡಪದ, ಹನುಮಂತಪ್ಪ ಹಡಪದ, ಚಂದ್ರಶೇಖರ ನಾಗರಳ್ಳಿ, ಕರಿಬಸಪ್ಪ ಹಡಪದ, ಜಗದೀಶ ಹಡಪದ, ಎ.ವಿ.ಪ್ರಭು, ದೇವು ಹಡಪದ ಇದ್ದರು. 50 ಜನರಿಗೆ ಉಚಿತ ಕ್ಷೌರ ಮಾಡಲಾಯಿತು.