ಜಾನಪದ ಸಂಸ್ಕೃತಿ ಬಿಂಬಿಸುವ ಕಲೆ
ಕನ್ನಡಪ್ರಭ ವಾರ್ತೆ, ಗದಗ, ನ. 5
ಜಾನಪದ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವಂತಹ ಕಲೆಯಾಗಿದೆ. ಇಂದು ಅದರ ಪುನರುಜ್ಜೀವನ ಅವಶ್ಯ ಎಂದು ಶಿಕ್ಷಕ ಎಸ್.ಎನ್. ಬಳ್ಳಾರಿ ಹೇಳಿದರು.
ರಾಜ್ಯ ಸರ್ಕಾರದಿಂದ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಿ.ಬಿ. ಬಣ್ಣದ ಜಾನಪದ (ದೊಡ್ಡಾಟ) ಕಲಾ ಮೇಳ ಸಂಸ್ಥಾಪಕ ಅಧ್ಯಕ್ಷ ಅಶೋಕ ಬಣ್ಣದ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ಶಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಕೇಂದ್ರ ಗದಗ ಜಿಲ್ಲೆ ವತಿಯಿಂದ ಇತ್ತೀಚಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಪ್ರದರ್ಶನಗಳಲ್ಲೊಂದಾದ ದೊಡ್ಡಾಟ ಎಂಬ ಕಲೆಯನ್ನು ಇಲ್ಲಿ ವರೆಗೂ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಬಿ.ಬಿ. ಬಣ್ಣದ ದೊಡ್ಡಾಟ ಕಲಾ ಸಂಘ ಇತರರಿಗೆ ಮಾದರಿಯಾಗಿದೆ ಎಂದರು.
ಜಿಲ್ಲಾ ಡಿಎಸ್ಎಸ್ ನಾಯಕ ಸತೀಶ ಹೂಲಿ ಮಾತನಾಡಿ, ದೊಡ್ಡಾಟ ಎಂಬ ಕಲೆ ಬೆಟಗೇರಿ ಭಾಗದಲ್ಲಿ ಹಲವಾರು ದಶಕಗಳಿಂದ ತನ್ನದೇ ಆದ ವೈಶಿಷ್ಟ್ಯತೆಯನ್ನು ರೂಢಿಸಿಕೊಂಡು ಬಂದಿದೆ. ಇಂತಹ ಕಾಲಘಟ್ಟದಲ್ಲಿಯೂ ಸಹಿತ ಆ ಕಲೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಆರ್.ಎಸ್. ಗುಜ್ಜಲ, ಬಸವರಾಜ ಕಡೇಮನಿ ಹಾಗೂ ಸನ್ಮಾನ ಸ್ವೀಕರಿಸಿದ ಅಶೋಕ ಬಣ್ಣದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಮೇಲಿನಮನಿ, ಜೈಭೀಮ ಸೇನಾ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ಜೈಭೀಮ ಆಟೋ ರಿಕ್ಷಾ ಮಾಲಕರ-ಚಾಲಕರ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ, ಯುವರಾಜ ಬಳ್ಳಾರಿ ಸಂತೋಷ ಬಳ್ಳಾರಿ, ರವಿ ಹಾದಿಮನಿ, ಪ್ರಕಾಶ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.
ಮಹಿಳೆ ಸಾವು: ಕೊಲೆ ಶಂಕೆ
ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಮಹಿಳೆ ದಾವಲಬಿ ಹುಸೇನ್ಸಾಬ್ ವಡ್ಡಟ್ಟಿ ಎನ್ನುವವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾದ ಘಟನೆ ಜರುಗಿದೆ.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಪೂಜೆ ಮಾಡಲೆಂದು ಹೊಲಕ್ಕೆ ತೆರಳಿದ ದಾವಲಬಿ ರಾತ್ರಿ 7.30 ಗಂಟೆಯಾದರೂ ಮನೆಗೆ ಮರಳಿ ಬರದಿದ್ದಾಗ ಗಾಬರಿಗೊಂಡ ಹೊಲಕ್ಕೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ತಾಯಿ ದಾವಲಬಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಬಂಧಿಸುವಂತೆ ಪುತ್ರ ಮೈನುಸಾಬ್ ಹುಸೇನ್ಸಾಬ್ ವಡ್ಡಟ್ಟಿ ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಡಿವೈಎಸ್ಪಿ ವಿಜಯ ಡಂಬಳ, ಮುಂಡರಗಿ ಸಿಪಿಐ ಶ್ರೀಪಾದ ಜೆಲ್ದೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಶ್ರೀಪಾದ ಜೆಲ್ದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.