ಧಾರ್ಮಿಕ ನೆಲೆಗಟ್ಟಿನ ಮೇಲೆ ಬುನಾದಿ ಕಟ್ಟಿ
ಕನ್ನಡಪ್ರಭ ವಾರ್ತೆ, ಗದಗ, ನ. 5
ಬದುಕು ಎಂಬುದು ಏಳುಬೀಳುಗಳು, ಹಳ್ಳ-ದಿನ್ನೆಗಳ ಹಾದಿ. ಅದೊಂದು ಅದ್ಭುತಗಳ ಮಾಲೆ. ಇಲ್ಲಿ ನಾವು ಉತ್ತಮ ವ್ಯಕ್ತಿತ್ವವನ್ನು ಬೆಳಸಿಕೊಂಡು ಧಾರ್ಮಿಕ ನೆಲೆಗಟ್ಟಿನ ಮೇಲೆ ಬದುಕಿನ ಬುನಾದಿ ಕಟ್ಟಬೇಕೆಂದು ಬಳಗಾನೂರ ಜಂತ್ಲಿ-ಶಿರೂರ ಪೀಠಾಧಿಪತಿ ಶಿವಶಾಂತವೀರ ಶರಣರು ಹೇಳಿದರು.
ಸೋಮವಾರ ಜಂತ್ಲಿ-ಶಿರೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರಮಠದಲ್ಲಿ ನಡೆದ 220ನೇ ಶಿವಾನುಭವ ಹಾಗೂ 19ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ಧರ್ಮ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಧರ್ಮವಿಲ್ಲದವರ ಬದುಕು ಅರ್ಥಹೀನ. ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಲ್ಲಿ ಮನುಷ್ಯತ್ವವನ್ನು ರೂಪಿಸುವ ಜೊತೆಗೆ ಅವನಲ್ಲಿ ಅರಿವನ್ನುಂಟು ಮಾಡಿ ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಪುರಾಣ ಪುಣ್ಯಕತೆಗಳ ಆಲಿಸುವಿಕೆಯಿಂದ ಮನಸ್ಸಿನ ನಿಗ್ರಹತೆ ಉಂಟಾಗಿ ಚೇತೂಹಾರಿ ಜೀವನ ಕಂಡು ಬರುತ್ತದೆ. ಪ್ರತಿಯೊಂದು ಸಮಸ್ಯೆಗೂ ಧಾರ್ಮಿಕತೆಯಲ್ಲಿ ಪರಿಹಾರವಿದ್ದು, ಇಂತಹ ಶುಭ ಕಾರ್ಯಗಳು ಸಮಾಜದಲ್ಲಿ ಹೆಚ್ಚು ಮೂಡಿಬರಬೇಕು ಎಂದರು.
ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು. ಬೆಳದಡಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಂಭುಲಿಂಗಯ್ಯ ಕಲ್ಮಠ, ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪುರ ಅವರಿಂದ ಪುರಾಣ ಪ್ರವಚನ ನಡೆಯಿತು. ಶಂಕ್ರಯ್ಯ ಗುರುಮಠ, ಸಂತೋಷ ಕುಮಾರ ಕೂಡ್ಲಿಗಿ ಮುಂತಾದವರು ಹಾಜರಿದ್ದರು.
ಗದಗ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕವಿತಾ ದಂಡಿನ ಅವರನ್ನು ಸನ್ಮಾನಿಸಲಾಯಿತು.
ಗವಿಸಿದ್ದಯ್ಯ ಹಳ್ಳಿಕೇರಿಮಠ ನಿರೂಪಿಸಿದರು. ಮಂಜುನಾಥ ಸ್ವಸಹಾಯ ಗುಂಪುಗಳ ಮುಖ್ಯಸ್ಥರು ಶಿವಾನುಭವದ ಭಕ್ತಿ ಸೇವೆ ವಹಿಸಿದ್ದರು.