ಬಿಟಿ ಹತ್ತಿ ಬಿತ್ತಿ ಕೆಟ್ಟ ರೈತ
ಕನ್ನಡಪ್ರಭ ವಾರ್ತೆ, ಗದಗ, ನ. 6
ರೈತರಲ್ಲಿ ಹತ್ತಾರು ಕನಸು ಸೃಷ್ಟಿಸಿ, ಯಾವುದೇ ಕೀಟ ಬಾಧೆ ಬರುವುದಿಲ್ಲ, ಹೆಚ್ಚಿನ ಆದಾಯ ಪಡೆಯಬಹುದು ಎನ್ನುವ ಕಲ್ಪನೆ ಮೂಡಿಸಿರುವ ಬಿಟಿಹತ್ತಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಬೆಳೆ ಬರದೇ ಜಿಲ್ಲೆಯ ರೈತರಿಗೆ ನಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಾವಿರಾರು ಹಣ ಖರ್ಚು ಮಾಡಿದ ಬೆಳೆಯಲ್ಲಿ ಕಾಯಿಗಳೇ ಬಿಡುತ್ತಿಲ್ಲ. ಹಾಗಾಗಿ ಹೆಚ್ಚಿನ ಲಾಭಾಂಶದ ಕನಸು ಕಂಡಿದ್ದ ರೈತರ ಆಸೆ ನುಚ್ಚು ನೂರಾಗುವ ಸಾಧ್ಯತೆ ನಿಚ್ಚಳವಾಗಿದೆ.
ತಲೆ ತಲಾಂತರಗಳಿಂದ ಬಿತ್ತನೆ ಮಾಡುತ್ತಿದ್ದ ಜಯಧರ ಹತ್ತಿಗಿಂತ ಬಿಟಿ ಹತ್ತಿ ಹೆಚ್ಚಿನ ಇಳುವರಿ ಬರುತ್ತದೆ. ಮುಂಗಾರು ಹಂಗಾಮಿನಲ್ಲಿಯೂ ಇದನ್ನು ಬಿತ್ತನೆ ಮಾಡಬಹುದು, ಈ ಹತ್ತಿಗೆ ಅತಿ ಹೆಚ್ಚಿನ ಬೆಲೆ ಸಿಗುತ್ತದೆ ಎನ್ನುವ ಹತ್ತಾರು ಕನಸುಗಳನ್ನು ನಾಲ್ಕೈದು ವರ್ಷಗಳ ಹಿಂದೆ ರೈತರ ತಲೆಯಲ್ಲಿ ತುಂಬಿದ ಬಿಟಿ ಹತ್ತಿ ಉತ್ಪಾದನೆಯ ಕಂಪನಿಗಳು ಹತ್ತಿ ಬೀಜದ ಬೆಲೆಯಲ್ಲಿ ಒಮ್ಮೆಲೇ ಹೆಚ್ಚಳವನ್ನು ಮಾಡಿ ಲಾಭಾಂಶವನ್ನು ಪಡೆದುಕೊಂಡರು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ರೈತರು ಬಿತ್ತನೆ ಮಾಡಿದ ಬಿಟಿ ಹತ್ತಿಯಲ್ಲಿ ಸಾಕಷ್ಟು ಕಳಪೆ ಬೀಜಗಳಿದ್ದು ಹುಟ್ಟಿದ ಬೆಳೆಯಲ್ಲಿ ಕಾಯಿಗಳೇ ಇಲ್ಲ.
ಬಿತ್ತನೆ ವಿವರ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ 5707 ಹೆಕ್ಟೇರ್ ಪ್ರದೇಶದಲ್ಲಿ ಬಿಟಿಹತ್ತಿ ಬಿತ್ತನೆಯಾಗಿದ್ದು, ಮುಂಡರಗಿ ತಾಲೂಕಿನಲ್ಲಿ 587 ಹೆಕ್ಟೇರ್, ಗದಗ ತಾಲೂಕಿನಲ್ಲಿ 948 ಹೆಕ್ಟೇರ್, ಶಿರಹಟ್ಟಿ ತಾಲೂಕಿನಲ್ಲಿ 2065 ಹೆಕ್ಟೇರ್, ನರಗುಂದ ತಾಲೂಕಿನಲ್ಲಿ 2107 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದರಲ್ಲಿ ಬೇರೆ ಬೇರೆ ಕಂಪನಿಯ ಬಿಟಿ ಹತ್ತಿಯನ್ನು ಬಿತ್ತನೆ ಮಾಡಿದ್ದಾರೆ. ಅದರಲ್ಲಿ ಸಿಂಹಪಾಲು ಕನಕ ಎನ್ನುವ ಕಂಪನಿಗೆ ಸೇರಿದ್ದು ಎನ್ನುವುದು ರೈತರು ನೀಡಿರುವ ದೂರುಗಳ ಆಧಾರದಲ್ಲಿ ತಿಳಿದು ಬರುವ ಸತ್ಯವಾಗಿದೆ.
2874 ರೈತರಿಂದ ದೂರು: ನಾವು ಬಿಟಿ ಹತ್ತಿ ಬಿತ್ತನೆ ಮಾಡಿದ್ದೇವೆ. ಅದಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದೇವೆ. ನಾವು ಬೀಜ ಖರೀದಿಸಿರುವ ಕುರಿತು ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ. ಆದರೆ ಹೊಲದಲ್ಲಿ ಬೆಳೆದ ಬೆಳೆ ಮಾತ್ರ ಇಂದಿಗೂ ಬೆಳೆಯುತ್ತಲೇ ಇದ್ದು, ಕಾಯಿಗಳು ಮಾತ್ರ ಬಿಡುತ್ತಿಲ್ಲ ಕೂಡಲೇ ನಮಗೆ ಸೂಕ್ತ ನ್ಯಾಯ ಒದಗಿಸಿ, ಬೀಜ ವಿತರಣೆ ಮಾಡಿರುವ ಕಂಪನಿಯಿಂದಾಗಲಿ ಅಥವಾ ಸರ್ಕಾರವಾಗಲಿ ನಮ್ಮ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲೆಯ ವಿವಿಧ ತಾಲೂಕುಗಳ 2874 ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದು, ರೈತರ ಸಂಖ್ಯೆಯನ್ನು ಗಮನಿಸಿದಲ್ಲಿ ಜಿಲ್ಲೆಯ ಎಷ್ಟೊಂದು ರೈತರು ಹಾನಿ ಅನುಭವಿಸುತ್ತಿದ್ದಾರೆ ಎನ್ನುವುದು ದಾಖಲೆಗೆಳಿಂದಲೇ ಸ್ಪಷ್ಟವಾಗುತ್ತದೆ.
ಇಲಾಖೆಯ ಬಗ್ಗೆ ಆಕ್ರೋಶ: ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ರೈತರು ಕಳಪೆ ಬೀಜದಿಂದ ತೊಂದರೆ ಅನುಭವಿಸುತ್ತಿರುವುದು ಕೃಷಿ ಇಲಾಖೆಯ ನಿರ್ಲಕ್ಷ್ಯದಿಂದಲೇ, ಇಂತಹ ಕಳಪೆ ಬೀಜಗಳು ಮಾರಾಟವಾಗುತ್ತಿದೆ.
ಬೀಜಗಳು ಮಾರಾಟವಾಗುವ ಪೂರ್ವದಲ್ಲಿಯೇ ಕೃಷಿ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಲ್ಲಿ ಇಂದು ರೈತರು ನಷ್ಟವನ್ನು ಎದುರಿಸುತ್ತಿರಲಿಲ್ಲ. ಆದರೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಖಾಸಗಿ ಕಂಪನಿಗಳಿಗೆ ಬೀಜ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು ಮೊದಲ ತಪ್ಪು, ಈಗ ಲಿಖಿತ ದೂರು ನೀಡಿದರೂ ಇಲ್ಲಿಯವರೆಗೂ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ರೈತರ ಅಳಲಾಗಿದೆ.
ಹಾರಿಕೆ ಉತ್ತರ: ರೈತರು ಇಲಾಖೆಗೆ ನೀಡಿದ ದೂರಿನ ಆಧಾರದಲ್ಲಿ ಧಾರವಾಡ ಕೃಷಿ ವಿವಿ ಹಿರಿಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಕೆಲವೆಡೆ ಪರಿಶೀಲನೆ ನಡೆಸಬೇಕಾಗಿದೆ. ಪರಿಶೀಲನೆ ಕಾರ್ಯ ಸಂಪೂರ್ಣ ಮುಗಿದ ನಂತರ ಕೃಷಿ ವಿವಿ ವಿಜ್ಞಾನದ ವರದಿಯನ್ನಾಧರಿಸಿ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ಕೇವಲ ಹಾರಿಕೆ ಉತ್ತರವನ್ನು ನೀಡುತ್ತಾರೆ.
-ಶಿವಕುಮಾರ ಕುಷ್ಟಗಿ