ಸಮಾಜ ಸುಧಾರಣೆಗೆ ಒತ್ತು ಅಗತ್ಯ
ಲಕ್ಷ್ಮೇಶ್ವರ: ಧಾರ್ಮಿಕ ಪರಂಪರೆ ಉಳಿಸಿ, ಬೆಳಸುವ ಕಾರ್ಯವನ್ನು ಮಾಡುವ ಜತೆಗೆ ಸಮಾಜ ಸುಧಾರಣೆಗೆ ಒತ್ತು ನೀಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬುಧವಾರ ಜ. ವೀರಗಂಗಾಧರ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರದಂತಹ ಪಟ್ಟಣದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಉಪಯೋಗವಾಗುವ ಬೃಹತ್ ಸಮುದಾಯ ಭವನ ನಿರ್ಮಾಣ ಮಾಡಿದ್ದು ಮೆಚ್ಚುವ ಕಾರ್ಯ. ಆಧುನಿಕ ಜಗತ್ತಿನಲ್ಲಿ ಸಾವು-ನೋವು ಹೆಚ್ಚುತ್ತಿದ್ದು, ನೆಮ್ಮದಿಗಾಗಿ ಭಾರತದತ್ತ ನೋಟ ಹರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಧಾರ್ಮಿಕ ಸಂಪ್ರದಾಯ, ಮಾನವೀಯ ಮೌಲ್ಯಗಳು ಉಳಿದುಕೊಂಡಿರುವುದರಿಂದಲೇ ಶಾಂತಿ ನೆಲೆಸಿದೆ ಎಂದರು. ಬಾಳೆಹೊನ್ನೂರಿನ ರಂಭಾಪುರಿ ಪೀಠ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿಗಾಗಿ ಅವಿರತ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಜ. ವೀರ ಸೋಮೇಶ್ವರ ಶ್ರೀಗಳು 23 ವರ್ಷಗಳಿಂದ ರಾಜ್ಯದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಪ್ರಗತಿಗಾಗಿ ಶ್ರಮಿಸುತ್ತಿರುವುದು ಮೆಚ್ಚುವ ಸಂಗತಿಯಾಗಿದೆ ಎಂದು ಶೆಟ್ಟರ್ ಹೇಳಿದರು.
ಮಸೂದೆ ವಾಪಸಾತಿಗೆ ಆಗ್ರಹ: ಭಾರತದಲ್ಲಿ ಅನೇಕ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಆಚರಿಸುವ ಜನರಿದ್ದು, ಇಲ್ಲಿನ ಜನರ ಪರಂಪರೆಗೆ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಮಾರಕ ಉಂಟು ಮಾಡುವ ಮೂಢ ನಂಬಿಕೆ ಮಸೂದೆ ಮಂಡನೆಯನ್ನು ತಾವು ಬಲವಾಗಿ ಖಂಡಿಸುವುದಾಗಿ ತಿಳಿಸಿದರು. ಸಮಾಜವನ್ನು ಒಡೆಯವ ಇಂತಹ ಮಸೂದೆಗಳನ್ನು ಸರ್ಕಾರ ಜಾರಿಗೆ ತರುವ ಬದಲು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಲಿ. ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡವನ್ನು ಶೀಘ್ರ ತಾಲೂಕಾಗಿ ಮಾಡಬೇಕು. ಬಿಜೆಪಿ ಸರ್ಕಾರ ರಚನೆ ಮಾಡಿದ್ದ 43 ಹೊಸ ತಾಲೂಕುಗಳನ್ನು ಕಾಂಗ್ರೆಸ್ ಸರ್ಕಾರ ನೆನೆಗುದಿಗೆ ಹಾಕುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ನೀಡುತ್ತಿರುವುದು ಶೋಚನೀಯ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪಕ್ಷಭೇದ ಮರೆತು ಜ. ವೀರ ಗಂಗಾಧರ ಸಮುದಾಯ ಭವನ ನಿರ್ಮಾಣ ಮಾಡಿದ್ದು ಒಳ್ಳೆಯ ಕಾರ್ಯ. ಕಾಂಗ್ರೆಸ್ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಮಸೂದೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ನಾವು ಸಿದ್ಧ ಎಂದರು. ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಪೀಠದ ಜ. ವೀರ ಸೋಮೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ಮುಕ್ತಿಮಂದಿರದ ವಿಮಲ ರೇಣುಕ ವೀರ ಮುಕ್ತಿಮುನಿ ಶ್ರೀಗಳು, ಕಲಾದಗಿಯ ಚಂದ್ರಶೇಖರ ಶ್ರೀಗಳು ಮಾತನಾಡಿದರು. ಲಕ್ಷ್ಮೇಶ್ವರದ ಮಳೆ ಮಲ್ಲಿಕಾರ್ಜುನ ಶ್ರೀಗಳು, ಸಿಂದಗಿಯ ಶ್ರೀಗಳು, ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಬಸಣ್ಣ ಮಲ್ಲಾಡದ, ಆನಂದ ಮೆಕ್ಕಿ, ಎಸ್.ಎಸ್. ಬಾಳಿಹಳ್ಳಿಮಠ ಸೇರಿದಂತೆ ಎಲ್ಲ ಟ್ರಸ್ಟಿಗಳು ಹಾಗೂ ಅನೇಕ ಭಕ್ತರು ಹಾಜರಿದ್ದರು.