ಶಂಕಿತ ಡೆಂಘೀಗೆ ಯುವಕ ಬಲಿ
ಗಜೇಂದ್ರಗಡ: ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಮೀಪದ ರಾಜೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ. ಪರಶುರಾಮ ಪೀರಪ್ಪ ಚವ್ಹಾಣ (22) ಮೃತಪಟ್ಟ ವ್ಯಕ್ತಿ. ಕಳೆದ ಒಂದು ವಾರದಿಂದ ವಿಪರೀತ ಜ್ವರ ಬಾಧೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಿಂದ ಜ್ವರ ಬಾಧೆ ತಹಬದಿಗೆ ಬಾರದ್ದನ್ನು ಗಮನಿಸಿದ ಸ್ಥಳೀಯ ವೈದ್ಯರು ಡೆಂಘೀ ಜ್ವರವೆಂದು ಸಂಶಯ ವ್ಯಕ್ತಪಡಿಸಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದರು. ವೈದ್ಯರ ಸಲಹೆಯಂತೆ ಎಸ್ಡಿಎಂ ಆಸ್ಪತ್ರೆಯಲ್ಲಿ ಕಳೆದ 4 ದಿನದಿಂದ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 8 ಗಂಟೆಗೆ ಮೃತಪಟ್ಟರೆಂದು ಕುಟುಂಬದ ಮೂಲಗಳು ತಿಳಿಸಿವೆ.