ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳಿ: ಶಾಸಕ ದೊಡ್ಡಮನಿ
ಲಕ್ಷ್ಮೇಶ್ವರ: ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಣದ ಪಾತ್ರ ಗಣನೀಯವಾಗಿದ್ದು, ಶೈಕ್ಷಣಿಕವಾಗಿ ಹಿಂದುಳಿದ ಜನರು ಶಿಕ್ಷಣದ ಪ್ರಯೋಜನ ಪಡೆದುಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ನೂತನ ಕಟ್ಟಡದ ಭೂಮಿಪೂಜೆಯನ್ನು ಮಂಗಳವಾರ ಸಂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರಸ್ತುತ ಸರ್ಕಾರಿ ಉರ್ದು ಪ್ರೌಢಶಾಲೆಗೆ 11 ಕೊಠಡಿಗಳನ್ನು ನಿರ್ಮಾಣ ಮಾಡುವುದು ಹಾಗೂ 2 ಶೌಚಾಲಯಗಳ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಈ ಯೋಜನೆ ಅಡಿ ದೇಶದ ಎಲ್ಲ ಪ್ರೌಢಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಿ ದೇಶದಲ್ಲಿನ ಮಾಧ್ಯಮಿಕ ಶಿಕ್ಷಣ ಬಲಪಡಿಸುವ ಕಾರ್ಯಕ್ರಮ ಹಾಕಿಕೊಂಡು ಪ್ರೌಢಶಾಲಾ ಮಟ್ಟದ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದೆ. ಅದಕ್ಕಾಗಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಎಲ್ಲ ವರ್ಗದ ಜನರು ಮುಂದೆ ಬರಬೇಕು.
ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಅವಶ್ಯ. ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿಯ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಅದಕ್ಕಾಗಿ ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಬಗ್ಗೆ ಆಗಾಗ ಗಮನ ಹರಿಸಬೇಕು ಎಂದರು.
ಈ ಸಂದರ್ಭ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಸದಸ್ಯ ಜಯಕ್ಕ ಕಳ್ಳಿ, ಗಂಗಾಧರ ಮ್ಯಾಗೇರಿ, ಗಣಪತಿ ಬೇವಿನಮರದ, ರಾಜು ಕುಂಬಿ, ಬಸವರಾಜ ಓದಾನವರ, ನಾಗಪ್ಪ ಓಂಕಾರಿ, ದಾದಾಪೀರ್ ಮುಚ್ಚಾಲೆ, ಎಸ್.ಎಂ. ಪಟವೇಗಾರ, ಅನ್ವರಸಾಬ್ ಹವಾಲ್ದಾರ್, ಕ್ಷೇತ್ರ ಶಿಕ್ಷಣ ಸಂಯೋಜಕಿ ಜೆ.ಬಿ. ಗುಡಿ, ಸಿಆರ್‌ಪಿ ಬಿ.ಜಿ. ಕನವಳ್ಳಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಕುರಹಟ್ಟಿ, ಪಟ್ಟಣದ ಅಂಜುಮನ್ ಸಂಸ್ಥೆ ಅಧ್ಯಕ್ಷ ಗೌಸುಸಾಬ್ ಕಾರಡಗಿ, ದೂದಪೀರಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ, ಇಕ್ಬಾಲ್ ಸೂರಣಗಿ, ರಾಜು ಅಂದಲಗಿ, ಬಾಬು ಅಳವಂಡಿ, ನೀಲಪ್ಪ ಸೆರಸೂರಿ, ಅಭಿಯಂತ ಜಿ.ಆರ್. ಹಿರೇಮಠ, ಗುತ್ತಿಗೆದಾರರ ಕಂಪನಿಯ ಕಾರ್ಯನಿರ್ವಾಹಕ ರವಿವರ್ಮ ಮುಂತಾದವರು ಉಪಸ್ಥಿತರಿದ್ದರು.