ಶುದ್ಧ ನೀರು ಪೂರೈಕೆಯಿಂದ ಆರೋಗ್ಯ ಸುಧಾರಣೆ: ನಾಗರಾಜ ಲಕ್ಕುಂಡಿ
ಶಿರಹಟ್ಟಿ: ಕೇವಲ ರು. 2ಕ್ಕೆ 20 ಲೀಟರ್ ಶುದ್ಧ ಕುಡಿವ ನೀರು ಪೂರೈಸುವುದರ ಮೂಲಕ ರೈತರಿಗೆ ಹಾಗೂ ಗ್ರಾಮೀಣ ಜನರ ಆರೋಗ್ಯ ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಹರಿಪುರ ಗ್ರಾಮದಲ್ಲಿ ಬುಧವಾರ ಪಟ್ಟಣ ಪಂಚಾಯಿತಿಯ 13ನೇ ಹಣಕಾಸು ಯೋಜನೆ ಅಡಿಯಲ್ಲಿ ರು. 5.22 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಉಳ್ಳವರು, ಅಧಿಕಾರಸ್ಥರು, ಅನುಕೂಲಸ್ಥರು, ಶ್ರೀಮಂತರು ಮಾತ್ರ ಶುದ್ಧ ಕುಡಿಯುವ ನೀರು ಕುಡಿಯಬೇಕೆಂಬ ಪರಿಸ್ಥಿತಿ ಇತ್ತು. ಆದರೆ ಬಡವರೂ ಶುದ್ಧ ಕುಡಿಯುವ ನೀರು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ 6 ಕೋಟಿ 60 ಲಕ್ಷ ಜನ ಪ್ಲೋರೈಡ್ ನೀರು ಬಳಸಿ ವಿವಿಧ ಬಗೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ. 3 ಕೋಟಿ 70 ಲಕ್ಷ ಜನ ಅಶುದ್ಧ ನೀರು ಸೇವನೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಶುದ್ಧ ಕುಡಿಯುವ ನೀರನ್ನು ರೈತರಿಗೆ ಹಾಗೂ ಗ್ರಾಮೀಣ ಜನರಿಗೆ ಕೊಡುವುದರ ಜತೆಗೆ ಸಮಾನತೆ ತರುವ ದೃಷ್ಟಿಯಿಂದ ಪ್ಲೋರೈಡ್ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗುತ್ತಿದೆ. ಹಂತ ಹಂತವಾಗಿ ಪಟ್ಟಣದಲ್ಲಿ ನೀರು ಲಭ್ಯವಿರುವ ಸ್ಥಳ ಗುರುತಿಸಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಪಂ ಸದಸ್ಯ ಸಂತೋಷ ಕುರಿ, ಬಾಲಚಂದ್ರ ಇಟಗಿ, ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ, ಅಶೋಕ ದೇಸಾಯಪಟ್ಟಿ, ಗನಿಸಾಬ ಬುವಾಜಿ, ಮಾಬುಸಾಬ ರೋಣದ ಮುಂತಾದವರು ಉಪಸ್ಥಿತರಿದ್ದರು.