ಗದಗ-ವಾಡಿ ರೇಲ್ವೆ ಕನಸು ನನಸಾಗಲಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 8
ಈ ಭಾಗದ ಜನರ ಹಲವು ವರ್ಷಗಳ ಕನಸಾಗಿದ್ದ ಗದಗ-ವಾಡಿ ರೈಲು ಮಾರ್ಗವನ್ನು ಕೇಂದ್ರ ಸರ್ಕಾರದ ಕೆಲ ರೇಲ್ವೆ ಅಧಿಕಾರಿಗಳ ನಿರ್ಲಕ್ಷ್ಯ, ಅಸಡ್ಡೆಯಿಂದಾಗಿ ಈ ಭಾಗದಿಂದ ಸ್ಥಳಾಂತರಗೊಂಡಿದ್ದು, ಇಲ್ಲಿನ ಹಲವು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ನೋವುಂಟು ಮಾಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮೀಕ್ಷೆಯಾಗಿ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಅಸಡ್ಡೆಯಿಂದ ರೇಲ್ವೆ ಮಂಡಳಿಯ ಕಡತಗಳಲ್ಲಿ ಕಳೆದು ಹೋಗಿದ್ದ ಗದಗ-ವಾಡಿ ರೇಲ್ವೆ ಯೋಜನೆಗೆ ಕಳೆದ ವರ್ಷ ಜೂನ್ನಲ್ಲಿ ಕೇಂದ್ರ ರೇಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಹುಬ್ಬಳಿಯ ಕಾರ್ಯಕ್ರಮ ಒಂದರಲ್ಲಿ ಯೋಜನೆ ಪ್ರಾರಂಭಿಸುವ ಬಗ್ಗೆ ಮಾತನಾಡಿ, ಈ ಭಾಗದ ಜನರಿಗೆ ಆಸೆ ತುಂಬಿದ್ದರು. 5-6 ದಶಕಗಳ ಮೊದಲು ಗದಗ-ಗದ್ವಾಲ್ ಎಂದು ಸಮೀಕ್ಷೆಗೊಂಡು 60 ವರ್ಷಗಳ ಹಿಂದೆಯೇ ಇಲ್ಲಿನ ಜನರಿಗೆ ರೇಲ್ವೆ ಸೇವೆ ನೀಡುವ ಉದ್ದೇಶದಿಂದ ಪ್ರಾರಂಭವಾಗಬೇಕಾಗಿದ್ದ ಯೋಜನೆಯಿಂದ ಸರ್ಕಾರ, ಜನಪ್ರತಿನಿಧಿಗಳು ಹೇಗೆ ಹಿಂದೆಸರಿದರೊ ಗೊತ್ತಿಲ್ಲ. ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕೇಂದ್ರದಲ್ಲಿ ರೇಲ್ವೆ ಸಚಿವರಾಗಿರುವ ಸಾಕಷ್ಟು ಉದಾಹರಣೆಗಳಿದ್ದರೂ ತೀರಾ ಕಡೆಗಣಿಸಿದ ಪ್ರದೇಶಗಳಿಗೆ ರೇಲ್ವೆ ಸೌಲಭ್ಯ ಒದಗಿಸುವಲ್ಲಿ ವಿಫಲರಾಗಿರುವುದು ನೋವಿನ ಸಂಗತಿ.
1950ರ ಪೂರ್ವದಲ್ಲಿಯೇ ಸಮೀಕ್ಷೆ: ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕೃತ ಮಾಹಿತಿಗಳ ಪ್ರಕಾರ ಗದಗ ಹಾಗೂ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ರೈಲು ಮಾರ್ಗದಿಂದ ಸಂಪರ್ಕಿಸುವ ಯೋಜನೆಯೊಂದನ್ನು ಸಮೀಕ್ಷೆ ಮಾಡುವ ಕೆಲಸ 1950ರ ಪೂರ್ವದಲ್ಲಿಯೇ ಪ್ರಾರಂಭಿಸಲಾಗಿತ್ತು. ಯೋಜನೆ ಸಮೀಕ್ಷೆಯನ್ನು ಕಣ್ಣಾರೆ ಕಂಡ ವೃದ್ಧರು ಈಗಲೂ ಇದ್ದಾರೆ. ಕಣಗಿನಹಾಳ, ಕೋಟುಮಚಗಿ, ನರೇಗಲ್ಲ, ನಿಡಗುಂದಿ, ಗಜೇಂದ್ರಗಡ, ಹನುಮಸಾಗರ, ಇಲಕಲ್ ಮಾರ್ಗವಾಗಿ ಗದ್ವಾಲಕ್ಕೆ ಮಾಡಿದ ಸಮೀಕ್ಷೆಯನ್ನು ಕಣ್ಣಾರೆ ಕಂಡವರು ಈ ಎಲ್ಲ ಊರುಗಳಲ್ಲಿಯೂ ಸಿಗುತ್ತಾರೆ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಜನರಿಗೆ ಇರುವ ಮಾಹಿತಿ ಕೊರತೆ ಇವೆಲ್ಲ ಸೇರಿ ಆ ಯೋಜನೆ ಇಲ್ಲಿವರೆಗೆ ಸಾಕಾರಗೊಂಡಿಲ್ಲ.
ನಂತರದ ದಿನಗಳಲ್ಲಿ ಎಲ್ಲೋ ಮೂಲೆಯಲ್ಲಿ ಬಿದ್ದಿದ್ದ ಯೋಜನೆಗೆ ಪುನರ್ಜೀವ ನೀಡಿದ ಕೆ.ಎಚ್. ಮುನಿಯಪ್ಪನವರು ಅಭಿನಂದನಾರ್ಹರು. ಆದರೆ, ಯೋಜನೆಯ ಮೂಲ ಮಾರ್ಗವನ್ನು ಬದಲಿಸಿ ಮತ್ತೊಮ್ಮೆ ಈ ಭಾಗವನ್ನು ರೈಲು ಸೇವೆಯಿಂದ ವಂಚಿತಗೊಳಿಸಲು ಹೊರಟಿರುವುದು ಈ ಭಾಗದ ಜನರ ದೌರ್ಭಾಗ್ಯ. ಇಲ್ಲಿನ ಜನರು ಸಹ ಹಾಗೆಯೇ, ಬಂದಾಗ ಬಂತು. ಹೋದಾಗ ಹೋಯ್ತು ಎನ್ನುವ ಮನಸ್ಥಿತಿ ಉಳ್ಳವರು. ಅನ್ಯಾಯವಾದಾಗಲೂ ಹೋರಾಟ ಮಾಡಲು ಎಚ್ಚೆತ್ತುಕೊಳ್ಳುತ್ತಿಲ್ಲ.
ಗದಗ-ವಾಡಿ ಮಾರ್ಗ ನರೇಗಲ್ಲ, ಗಜೇಂದ್ರಗಡ, ಇಲಕಲ್ ಮೂಲಕ ಹಾಯ್ದು ಹೋದರೆ ಅತಿ ಕಡಿಮೆ ಅಂತರದಲ್ಲಿ ಹೆಚ್ಚು ಪಟ್ಟಣಗಳನ್ನು ಸಂಪರ್ಕಿಸುವ ಕಡಿಮೆ ವೆಚ್ಚದ ಮಾರ್ಗವಾಗುತ್ತದೆ. ಶೈಕ್ಷಣಿಕ ಕೇಂದ್ರ ನರೇಗಲ್ಲ, ಗದಗ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಪಟ್ಟಣ ಗಜೇಂದ್ರಗಡ, ಗ್ರಾನೈಟ್ ಉದ್ದಿಮೆಗೆ ವಿಶ್ವ ಪ್ರಸಿದ್ಧವಾದ ನಗರ ಇಲ್ಲಕಲ್ ಇವುಗಳಿಗೆ ಈ ಯೋಜನೆ ಅತಿ ಅವಶ್ಯವಿದೆ. ರೇಲ್ವೆ ಮಂಡಳಿ ಇದನ್ನು ಗಮನಿಸಿದೆಯೇ ? ಇದನ್ನು ಕೇಳುವವರ್ಯಾರು ?
- ಅಶೋಕ ಬೇವಿನಕಟ್ಟಿ
ರೈಲು ಹೋರಾಟ ಮುಖಂಡ
ನಮ್ಮಭಾಗಕ್ಕೆ ರೈಲು ಪ್ರಮುಖವಾಗಿ ಅವಶ್ಯ. ಇಲ್ಲಿ ಶಿಕ್ಷಣ ಕೇಂದ್ರಗಳು, ವ್ಯಾಪಾರಿ ಕೇಂದ್ರ, ಕಲ್ಲಿನ ಕೋರಿ ಮೊದಲಾದವು ಇರುವುದರಿಂದ ಹಾಗೂ ರೈಲು ಇಲಾಖೆಗೆ ಇದು ಆದಾಯದ ಮೂಲವಾಗಿರುವುದರಿಂದ ನಮಗೆ ಅತ್ಯವಶ್ಯ. ಒಂದು ವೇಳೆ ಮಾರ್ಗ ಈ ಭಾಗಕ್ಕೆ ಬಾರದಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
- ಎಸ್.ಎಫ್. ನವಲಗುಂದ
ಸಾಮಾಜಿಕ ಹೋರಾಟಗಾರ
-ನಿಂಗರಾಜ ಬೇವಿನಕಟ್ಟಿ