ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Vishwanath S
Updated On : 9 Nov 2013, 11:54 am

ಗದಗ: ನಗರದಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾಸ್ಪತ್ರೆಯು ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿ ಸೌಲಭ್ಯ ಮರಿಚಿಕೆಯಾಗಿವೆ. ವೈದ್ಯರ ಕೊರತೆ, ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಜೈಭೀಮ ಸೇನಾದ ಗದಗ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಜರುಗಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಸ್ಪತ್ರೆಯು ನಗರ ಪ್ರದೇಶದಿಂದ 6 ಕೀ.ಮಿ. ದೂರದಲ್ಲಿದ್ದು, ಇದರಿಂದಾಗಿ ಸಾರ್ವಜನಿಕರು ಆಸ್ಪತ್ರೆಗೆ ಹೋಗಬೇಕಾದಲ್ಲಿ ರು. 50-100 ರವರೆಗೆ ಖರ್ಚು ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಆಸ್ಪತ್ರೆಗೆ ರೋಗಿಗಳು ಹೋದಾಗ ಅಲ್ಲಿ ವೈದ್ಯರೂ ಸಹ ಇರುವುದಿಲ್ಲ. ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಿದ ಆಸ್ಪತ್ರೆಯು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಯಲ್ಲಿ ಎಕ್ಸರೆ ಯಂತ್ರವಾಗಲಿ, ಸ್ಕ್ಯಾನಿಂಗ್, ಪಿಎಂ ಮಾಡಲು ಸರಿಯಾದ ಸಿಬ್ಬಂದಿ ಇರುವುದಿಲ್ಲ. ಈ ಕುರಿತು ಜಿಲ್ಲಾಡಳಿತ ಮೌನವಾಗಿರುವುದು ಖಂಡನಾರ್ಹವಾಗಿದೆ. ಅಲ್ಲದೇ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಬಳಸುವ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಯಾವುದೇ ರೋಗಿ ಸಾಯುವ ಸ್ಥಿತಿಯಲ್ಲಿಯೂ ಸಹ ವೈದ್ಯರು ಸರಿಯಾಗಿ ಸ್ಪಂದಿಸದೇ ಹುಬ್ಬಳ್ಳಿಯ ಕಿಮ್ಸ್‌ಗೆ ರೋಗಿಗಳನ್ನು ತೆಗೆದುಕೊಂಡು ಹೋಗಲು ತಿಳಿಸುತ್ತಾರೆ.
ಆಸ್ಪತ್ರೆಯಲ್ಲಿ ಸೂಕ್ತ ಔಷಧಿ ಸಿಗದೇ ರೋಗಿಗಳು ಪರದಾಡುವಂತಾಗಿದೆ. ಬರೀ ಔಷಧ ಖರೀದಿಸಲು ಸುಮಾರು 6-7 ಕಿ.ಮೀ ವರೆಗೆ ಪ್ರಯಾಣಿಸಿ ನಗರ ಪ್ರದೇಶಕ್ಕೆ ಬರುವ ಸ್ಥಿತಿಯಿದೆ. ಸರ್ಕಾರವು ಬಡವರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ನಿರ್ಮಿಸಿದ ಆಸ್ಪತ್ರೆಯು ಇಂದು ಬಡವರಿಗೆ ಸಹಕಾರಿಯಾಗದೇ ಹೆಚ್ಚು ಖರ್ಚುಮಾಡುವಂತಹ ಆಸ್ಪತ್ರೆಯಾಗಿ ಪರಿಣಮಿಸಿದೆ. ಇದರಿಂದಾಗಿ ರೋಗಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವೇಳೆಗೆ ಸರಿಯಾಗಿ ಆಗಮಿಸುತ್ತಿಲ್ಲ. ಈ ಕುರಿತು ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜೈಭೀಮ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿಮನಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪುರ, ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಬಸವರಾಜ ಬದಾಮಿ, ಪರಶುರಾಮ ಸೀತಿಮನಿ, ಹೇಮಂತ ಹುಬ್ಬಳ್ಳಿ, ಇಸ್ಮಾಯಿಲ್ ಕಲಾದಗಿ, ರಾಸ್ಟೀನ್ ಜೋಸೆಪ್, ವಿಜಯಕುಮಾರ, ಹೇಮಂತ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ಮಂಜುನಾಥ ಪರಾಪುರ, ಕೃಷ್ಣಾ ಸಂಗಾಪುರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement