ಆದೇಶ ಧಿಕ್ಕರಿಸಿ ಅಕ್ರಮ ಗಣಿಗಾರಿಕೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 9
ಕಲ್ಲು ಗಣಿಗಾರಿಕೆ ನಡೆಸದಂತೆ ಮಾಲೀಕರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಆದೇಶ ನೀಡಿದ್ದಲ್ಲದೆ, ಹೆಸ್ಕಾಂ ಇಲಾಖೆಯವರಿಂದ ವಿದ್ಯುತ್ ಕಡಿತ ಮಾಡಿಸಿದ್ದಾರೆ. ಆದರೆ, ಈ ಆದೇಶ ಧಿಕ್ಕರಿಸಿ ಹಗಲು-ರಾತ್ರಿ ಎನ್ನದೇ ಅಕ್ರಮವಾಗಿ ಜನರೇಟರ್ ಬಳಕೆ ಮಾಡಿಕೊಂಡು ಕಡಿ ಉತ್ಪಾದನೆ ಮಾಡುತ್ತಿದ್ದು, ತಹಸೀಲ್ದಾರ್, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ತಾಲೂಕಿನ ಅಕ್ಕಿಗುಂದ, ಚನ್ನಪಟ್ಟಣ, ಪರಸಾಪುರ, ಖಾನಾಪುರ, ಕುಂದ್ರಳ್ಳಿ ಹಾಗೂ ಛಬ್ಬಿ ಗ್ರಾಮಗಳ ಸುತ್ತಮುತ್ತಲೂ ಇರುವ ಕ್ರಷರ್ಗಳಿಂದ ಅಕ್ರಮವಾಗಿ ಜನರೇಟರ್ ಬಳಸಿ ರಾತ್ರಿಯಿಡೀ ಕಡಿ ಉತ್ಪಾದನೆ ಕಾರ್ಯಕ್ಕೆ ಮುಂದಾಗಿದ್ದಲ್ಲದೇ ಸ್ಫೋಟಕ ಸಾಮಗ್ರಿ ಬಳಕೆ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.
ಸ್ಫೋಟದ ಅಬ್ಬರಕ್ಕೆ ಸಿಲುಕಿ ರೈತರ ಜಮೀನಿನಲ್ಲಿರುವ ಪಂಪ್ಸೆಟ್ಗಳು ಅದುರಿ ಹೋಗುತ್ತಿವೆ. ಅತಿ ಆಳದಲ್ಲಿ ಸ್ಫೋಟ ಮಾಡುವುದರಿಂದ ಅಂತರ್ಜಲದ ಮೇಲೆಯೂ ತೀವ್ರ ಪರಿಣಾಮ ಬೀರುತ್ತಿರುವ ಅಂಶಗಳು ಬೆಳಕಿಗೆ ಬಂದಿವೆ.
ಆದೇಶಕ್ಕೆ ಕಿಮ್ಮತ್ತಿಲ್ಲ: ನೀರಾವರಿ ಮತ್ತು ಒಣಬೇಸಾಯ ಸೇರಿದಂತೆ ಕೃಷಿಯ ಮೂಲಕ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ರೈತರು ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಸರ್ಕಾರ ಆದೇಶ ಜಾರಿಗೆ ತಂದಿದ್ದನ್ನು ಗಮನಿಸಿ ಖುಷಿಪಟ್ಟಿದ್ದರು. ಆದರೆ, ಕ್ರಷರ್ ಮಾಲೀಕರು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ತಮ್ಮ ಕಾಯಕ ಮುಂದುವರಿಸಿರುವುದು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಕಾರಿಕೆ ನಡೆಯುತ್ತಿದ್ದು, ಡೈನಾಮೆಟ್ ಶಬ್ದಕ್ಕೆ ಮತ್ತು ಸ್ಫೋಟದಿಂದ ಸಿಡಿಯುವ ಕಲ್ಲುಗಳಿಂದ ಮತ್ತು ಹಾರುವ ಧೂಳಿನಿಂದ ತಾಲೂಕಿನ ರೈತರ ಬದುಕು ಹೀನಾಯ ಸ್ಥಿತಿಗೆ ತಲುಪಿದ್ದು, ನಿತ್ಯ, ನಿರಂತರ ಜನರೇಟರ್ ಬಳಕೆ ಮಾಡಿಕೊಂಡು ಕಡಿ ಉತ್ಪಾದನೆ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರೂ ಅಧಿಕಾರಿ ವರ್ಗ ಮಾತ್ರ ಯಾವುದನ್ನೂ ಗಮನಿಸುತ್ತಿಲ್ಲ. ಸೂಕ್ತ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಪರವಾನಗಿ ಇಲ್ಲದೆ ಅನಧಿಕೃತವಾಗಿ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ನಡೆದಿದ್ದು, ಗಣಿಗಾರಿಕೆ ನಡೆಸುವವರು ಸರ್ಕಾರದ ನಿಯಮದಂತೆ ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸದೇ ವಾಮಮಾರ್ಗ ಹುಡುಕಿಕೊಂಡಿದ್ದು ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಮಾತ್ರ ಜಾಣ ಕುರುಡತನ ಪ್ರದರ್ಶಿಸುತ್ತಿದೆ.
ಜನರೇಟರ್ ಬಳಕೆ ಮಾಡಿಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಇಲ್ಲಿಯ ವರೆಗೂ ನಮ್ಮ ಗಮನಕ್ಕೆ ಬಂದಿಲ್ಲ. ಈಗಾಗಲೇ ಪರಿಸರ ಮಾಲಿನ್ಯ ಇಲಾಖೆಯವರು ಕಡಿ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ನೋಟಿಸ್ ನೀಡಿದ್ದಾರೆ. ಜನರೇಟರ್ ಬಳಕೆ ಮಾಡಿಕೊಂಡು ಕಡಿ ಉತ್ಪಾದನೆಗೆ ಮುಂದಾದ ಕ್ರಷರ್ ಮಾಲೀಕರ ವಿರುದ್ಧ ತಕ್ಷಣವೇ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.
- ಆರ್.ಬಿ. ನಿಂಗನಗೌಡ್ರ
ಶಿರಹಟ್ಟಿ ತಾಲೂಕು ತಹಸೀಲ್ದಾರ
-ಮಹದೇವಪ್ಪ ಎಂ. ಸ್ವಾಮಿ