ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಚಾಲನೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಗ್ಲಿ ನಾಕಾದಿಂದ ದೂದಪೀರಾಂ ದರ್ಗಾದವರೆಗೂ ಇರುವ ಪ್ರಮುಖ ರಸ್ತೆ ಕಾಮಗಾರಿಗೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ ಅವರ ನೇತೃತ್ವದಲ್ಲಿ ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಗುರುವಾರ ಚಾಲನೆ ನೀಡಿದರು. ಸುಮಾರು 3 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯು ಪಟ್ಟಣದಲ್ಲಿನ ಪ್ರಮುಖ ಈ ರಸ್ತೆಯ ಅಗಲೀಕರಣ ಕಾರ್ಯ ಕೈಗೊಂಡಿತ್ತು. ಆದರೆ ಅಗಲೀಕರಣವಾದ ನಂತರ ಈ ರಸ್ತೆಯನ್ನು ನಿರ್ಮಾಣ ಮಾಡುವಲ್ಲಿ ಮಾತ್ರ ಮೀನಮೇಷ ಮಾಡುತ್ತ ಜನರ ಹಾಗೂ ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಈಗ ಈ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹಾಗೂ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ರಸ್ತೆ ಕಾಮಗಾರಿಯ ವೆಚ್ಚವು ಟೆಂಡರ್ನಲ್ಲಿ ತೋರಿಸಿದಂತೆ ಸರಿಯಾಗಿ ನಡೆಯಬೇಕು. ಮತ್ತು ಕಾಮಗಾರಿಯನ್ನು ಪಾರದರ್ಶಕವಾಗಿರುವಂತೆ ನೋಡಿಕೊಳ್ಳವುದರ ಜತೆಗೆ ನಿತ್ಯ ಇಲ್ಲಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಡೆಸಬೇಕು ಎಂದರು. ವಿರೂಪಾಕ್ಷಪ್ಪ ಪಡಗೇರಿ ಮಾತನಾಡಿ, ಗುಣಮಟ್ಟದ ವಿಷಯದಲ್ಲಿ ಆಡಳಿತ ಮಂಡಳಿಯ ಯಾವ ಸದಸ್ಯರೂ ರಾಜಿ ಮಾಡಿಕೊಳ್ಳುವದಿಲ್ಲ. ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡುವ ಮೂಲಕ ಆಗಿರುವ ತೊಂದರೆಯನ್ನು ನಿವಾರಿಸುವ ಉದ್ದೇಶವನ್ನು ಮಂಡಳಿಯು ಹೊಂದಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಆರ್.ಪಾಟೀಲ, ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ ಹಾಗೂ ಪುರಸಭೆ ಸದಸ್ಯರು, ಸತೀಶ ಮೆಕ್ಕಿ, ಬಸವರಾಜ ಮೆಣಸಿನಕಾಯಿ, ಶಕ್ತಿ ಕತ್ತಿ, ಶಂಕರ ಬಾಳಿಕಾಯಿ ಮುಂತಾದವರು ಹಾಜರಿದ್ದರು.