10 ಕಿ.ಮೀ.ಗೆ ಒಂದು ಪಪೂ ಕಾಲೇಜು ಸ್ಥಾಪನೆ
ಕನ್ನಡಪ್ರಭ ವಾರ್ತೆ, ರೋಣ, ನ. 10
ಗ್ರಾಮೀಣ ಭಾಗದ ಬಡ ಮಕ್ಕಳು ಕಾಲೇಜು ಹಂತದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ರೋಣ ಮತಕ್ಷೇತ್ರದಾದ್ಯಂತ ಪ್ರತಿ 10 ಕಿ.ಮೀ. ಗೆ ಒಂದರಂತೆ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಮತ್ತು ಎನ್.ಸಿ.ಸಿ ಕಂಪನಿ ಇವುಗಳ ಆಶ್ರಯದಲ್ಲಿ ಗುರುವಾರ ಜರುಗಿದ ಉನ್ನತೀಕರಿಸಿದ ಪ್ರೌಢ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ದೇಶವು ಸಂಪೂರ್ಣ ಸಾಕ್ಷರತೆ ಹೊಂದುವಂತೆ ಮಾಡುವ ದಿಶೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಕ್ರಾಂತಿ ಮಾಡಲು ಹೊರಟಿದೆ. ಆ ದಿಶೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುತ್ತಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲವಾಗಲೆಂದು ಈಗಾಗಲೇ ಪ್ರತಿ 5 ಕಿ.ಮೀ. ಗೆ ಒಂದರಂತೆ ಪ್ರೌಢ ಶಾಲೆಗಳನ್ನು ಆರಂಭಿಸಿದ್ದು, ಈಗಾಗಲೇ ಅದಕ್ಕೆ ಬೇಕಾದ ಕೊಠಡಿಗಳ ವ್ಯವಸ್ಥೆ ಕಲ್ಪಿಸಿದೆ. ಮಾರನಬಸರಿ ಗ್ರಾಮಕ್ಕೆ ರು. 75 ಲಕ್ಷ ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡ ಮತ್ತು ವಾಲ್ಮೀಕಿ ನಗರದಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡಿ, ಸಿಸಿ ರಸ್ತೆ ಹಾಗೂ ಪ್ರಾಚೀನ ದೇವಸ್ಥಾನವಾದ ಕಲ್ಲಯ್ಯಜ್ಜನ ದೇವಸ್ಥಾನ ಮರು ನಿರ್ಮಾಣಕ್ಕೆ ರು. 2 ಲಕ್ಷ ಅನುದಾನ ಒದಗಿಸಲಾಗಿದೆ.
ರು. 1 ಕೋಟಿ ವೆಚ್ಚದಲ್ಲಿ ಮಾರನಬಸರಿಯಿಂದ ಹೊಸಳ್ಳಿವರೆಗಿನ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ, ರು. 20 ಲಕ್ಷ ವೆಚ್ಚದಲ್ಲಿ ಜಕ್ಕಲಿಯಿಂದ ಮಾರನಬಸರಿ ಗ್ರಾಮದ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.
ಎಸ್ಡಿಎಂಸಿ ಸದಸ್ಯ ಮಕ್ತುಂಸಾಬ್ ಮೋತೆಖಾನ, ಅಧ್ಯಕ್ಷತೆ ವಹಿಸಿದ್ದ ಶೇಖರಪ್ಪ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರೌಢಶಾಲೆ ಕಟ್ಟಡಕ್ಕೆ ಭೂಮಿ ದಾನ ಮಾಡಿದ ಗ್ರಾಮದ ಬಸಪ್ಪ ಮರಡಿ ದಂಪತಿಯನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಶಂಭುಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಯೂಸಫ್ ಇಟಗಿ, ವೀರಣ್ಣ ಶೆಟ್ಟರ್, ಸುರೇಶಬಾಬು ಅರಹುಣಸಿ, ಮಲ್ಲಣ್ಣ ಮೇಟಿ, ಶರಣಪ್ಪ ಕುರಿ, ಶಿವಶರಣಪ್ಪ ಅಬ್ಬಿಗೇರಿ, ರೈಮಾನಸಾಬ್ ಮೋತೆಖಾನ, ಉಮೇಶ ದಿಂಡೂರ, ವೇಂಕಟೇಶ ಶಾಖಾ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕ ಡಿ.ಎನ್. ಉಮೇಶ ಸ್ವಾಗತಿಸಿ, ನಿರೂಪಿಸಿದರು.
--
ನೌಕರರು ಉತ್ತಮ ಕಾರ್ಯ ಮಾಡಲಿ
ನರಗುಂದ: ಸರ್ಕಾರದ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯು ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ನಮ್ಮ ಪ್ರತಿಭೆಯನ್ನು ಸಾರ್ವಜನಿಕರೇ ಗುರುತಿಸುವರು. ಅದಕ್ಕೆ ನಾವು ನಮ್ಮ ವೃತ್ತಿ ಮರೆಯದೇ ಉತ್ತಮ ಕಾರ್ಯ ಕೈಗೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಟಿ.ಜಿ. ಶಂಕರಮೂರ್ತಿಹೇಳಿದರು.
ಅವರು ಈಚೆಗೆ ಪಟ್ಟಣದ ಪುರಸಭೆ ಹತ್ತಿರದ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಅಂಗನವಾಡಿಯ ಕಾರ್ಯಕರ್ತರ, ಸಹಾಯಕರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಂದಿನ ಸರ್ಕಾರದಲ್ಲಿ ಈ ಇಲಾಖೆ ಸಚಿವರಾಗಿದ್ದ ಸಚಿವ ಸಿ.ಸಿ.ಪಾಟೀಲರ ಆದೇಶದ ಮೇರೆಗೆ ನಾನು ನರಗುಂದಕ್ಕೆ ಬಂದು ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಸಿ.ಸಿ. ಪಾಟೀಲರು ರಾಜ್ಯದಲ್ಲಿ ಹೊಸ ಯೋಜನೆಗಳನ್ನು ತರುವ ಮೂಲಕ ಈ ಇಲಾಖೆಯ ಪ್ರಗತಿಗೆ ಶ್ರಮಿಸಿದವರಾಗಿದ್ದಾರೆ. ಈ ಇಲಾಖೆಯ ಕರ್ತವ್ಯ ವಹಿಸಿಕೊಂಡ ನಾನು ಸಹ ತಾಲೂಕಿನ ಕಾರ್ಯಕರ್ತೆಯರ, ಸಹಾಯಕರ ಸಹಕರಾದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಈಗ ನನಗೆ ಕೋಲಾರದ ಕೆಜಿಎಫ್ಗೆ ವರ್ಗಾವಣೆಯಾಗಿದ್ದು, ಅಲ್ಲಿಯೂ ಇದೇ ರೀತಿ ಉತ್ತಮ ಕಾರ್ಯನಿರ್ವಹಿಸುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಎಸ್. ರಾಜಶೇಖರ, ರಾಜ್ಯ ಅಂಗನವಾಡಿ ಯೂನಿಯನ್ ಜಿಲ್ಲಾ ಸಂಚಾಲಕ ಎಂ.ಎಸ್. ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಪೊಲೀಸ್ಪಾಟೀಲ, ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಸಿದ್ಧಪ್ಪ ಮರ್ಚಕ್ಕನವರ, ಮಾರುತಿ ಮೇಗಲಮನಿ, ಉಮೇಶ ಬೋಳಶೆಟ್ಟಿ, ಬಸವರಾಜ ಹಲಕುರ್ಕಿ, ಸಿ.ಬಿ. ಸಬೇದಾರ, ಪ್ರಭು ಗುಡಾರದ ಮುಂತಾದವರು ಉಪಸ್ಥಿತರಿದ್ದರು.