ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಸ್ವಚ್ಛತೆಯಿಂದ ರು. 3.50 ಲಕ್ಷ ಕೋಟಿ ನಷ್ಟ

Lingaraj Badiger
Updated On : 11 Nov 2013, 12:18 pm

ಕನ್ನಡಪ್ರಭ ವಾರ್ತೆ, ಗದಗ, ನ. 10
ದೇಶದಲ್ಲಿ ಸ್ವಚ್ಛತೆ ಇಲ್ಲದ ಕಾರಣದಿಂದಾಗಿ ವರ್ಷಕ್ಕೆ ರು. 3 ಲಕ್ಷ 50 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗದಗ-ಬೆಟಗೇರಿ ನಗರಸಭೆ ವತಿಯಿಂದ ಭಾನುವಾರ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ನಡೆದ ಗದಗ ನಗರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು. ಸ್ವಚ್ಛತೆ ಇಲ್ಲದ ಕಾರಣ ಜನಸಾಮಾನ್ಯರು ರೋಗ-ರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ನಗರದ ಸ್ವಚ್ಛತೆ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ಈ ಕಾರ್ಯದಲ್ಲಿ ಸಹಕರಿಸಬೇಕು. ಸ್ವಚ್ಛತೆ ಕಾಪಾಡುವುದು ಕೇವಲ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕೆಲಸವಾಗಬಾರದು. ಇದರಲ್ಲಿ ಜನಸಾಮಾನ್ಯರ ಪಾತ್ರವೂ ಮುಖ್ಯ. ಸ್ವಚ್ಛತೆ ಎಲ್ಲರಿಗೂ ನೆಮ್ಮದಿ ಹಾಗೂ ಸಂತೋಷ ನೀಡುತ್ತದೆ. ಹಾಗಾಗಿ ದೈವತ್ವದ ಮಹತ್ವವನ್ನು ಸ್ವಚ್ಛತೆಗೆ ನೀಡಲಾಗುತ್ತಿದೆ. ಕಾರಣ ಸ್ವಚ್ಛ ಕಾಪಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಚರಂಡಿ, ಶೌಚಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ರಸ್ತೆಗಳಲ್ಲಿ ಕಸ ಹಾಕುವುದರ ಬಗ್ಗೆ ಜನರು ಜಾಗೃತರಾಗಬೇಕು. ಗುಜರಾತ್‌ನ ಸೂರತ್ ಮಾದರಿಯಲ್ಲಿ ಗದಗ ನಗರವನ್ನು ಕೂಡ ಸ್ವಚ್ಛ ನಗರವಾಗಿಸುವ ಮೂಲಕ ರಾಜ್ಯದಲ್ಲಿ ಮಾದರಿ ನಗರವನ್ನಾಗಿಸಲು ಪಣ ತೊಡಬೇಕು ಎಂದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಸ್ವಚ್ಛತೆ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ. ಹಾಗಾಗಿ ಸಾರ್ವಜನಿಕರು, ಸಂಘ, ಸಂಸ್ಥೆಗಳು ಭಾಗವಹಿಸುವ ಮೂಲಕ ನಗರ ಸ್ವಚ್ಛತೆಗೆ ಸಹಕರಿಸಬೇಕು. ನಗರದ ಸ್ವಚ್ಛತೆಯ ಉದ್ದೇಶದಿಂದ ವಾರ್ಡ್‌ವಾರು ಮೇಲುಸ್ತುವಾರಿ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಸಮುದಾಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ನಂತರ ನಗರ ಸ್ವಚ್ಛತಾ ಅಭಿಯಾನದ ಅಂಗವಾಗಿ ಮುನ್ಸಿಪಲ್ ಕಾಲೇಜು ಮೈದಾನದಿಂದ ಗಾಂಧಿವೃತ್ತ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಾಥಾದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮುರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ನಗರಸಭೆ ಆಯುಕ್ತ ಎಂ.ಬಿ. ನಡುವಿನಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement