ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆತ್ಮಜ್ಯೋತಿಯಲ್ಲಿ ದೇವರ ಕಾಣಿರಿ: ಜಯಂತಿ

Lingaraj Badiger
Updated On : 11 Nov 2013, 12:25 pm

ನರೇಗಲ್ಲ: ಪ್ರತಿಯೊಬ್ಬರ ಅಂತರಾತ್ಮದಲ್ಲಿ ಅಡಗಿರುವ ಆತ್ಮಜ್ಯೋತಿಯಲ್ಲಿ ದೇವರನ್ನು ಕಾಣಿ ಎಂದು ರಾಜಯೋಗಿನಿ ಬಿ.ಕೆ. ಜಯಂತಿ ಹೇಳಿದರು.  ಅವರು ಸಮೀಪದ ಅಬ್ಬಿಗೇರಿ ಗ್ರಾಮದ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ಯಾಂತ್ರೀಕೃತ ಜೀವನದಲ್ಲಿ ದೇವರ ಮೇಲಿನ ಪ್ರೀತಿ, ವಾತ್ಸಲ್ಯ ಕಡಿಮೆಯಾಗುತ್ತಿದೆ. ದೇವರೆಂದರೆ ನಮ್ಮಲ್ಲಿರುವ ಆತ್ಮ, ಆ ಆತ್ಮಕ್ಕೆ ಪ್ರತಿಯೊಬ್ಬರೂ ತಲೆಬಾಗಲೇ ಬೇಕು. ಇಂತಹ ಆತ್ಮದಲ್ಲಿಯೇ ಪ್ರತಿಯೊಬ್ಬರೂ ದೇವರನ್ನು ಕಾಣಬಹುದಾಗಿದೆ. ಆದರೆ ಕೆಲವರು ಪ್ರಪಂಚದ ತುಂಬೆಲ್ಲ ಯಾತ್ರೆ ಕೈಗೊಂಡು ದೇವರನ್ನು ಹುಡುಕುತ್ತಾರೆ. ಅದು ಮನುಷ್ಯನ ಜಾಢ್ಯತನವಾಗುತ್ತದೆ. ತನ್ನನ್ನು ತಾನು ಅರಿತೊಡೆ ಎಲ್ಲ ಆತ್ಮಗಳಲ್ಲಿ ಪರಮಾತ್ಮನನ್ನು ಕಾಣಬಹುದು. ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮಲ್ಲಿರುವ ಅಂತರಾತ್ಮವನ್ನು ಪರಶುದ್ಧಗೊಳಿಸಿ ಅಧ್ಯಾತ್ಮದ ಸನ್ಮಾರ್ಗದಲ್ಲಿ ನಡೆದರೆ ಪ್ರತಿಯೊಬ್ಬರಲ್ಲಿ ದೇವರು ನೆಲೆಸುತ್ತಾನೆ ಎಂದರು.  ಜಿಪಂ ಸದಸ್ಯ ಆರ್.ಬಿ. ಬಸವರಡ್ಡೇರ ಮಾತನಾಡಿ, ಓಂ ಶಾಂತಿ ಮಂತ್ರದಲ್ಲಿ ಎಷ್ಟೊಂದು ಶಕ್ತಿ ಅಡಕವಾಗಿದೆ ಓಂಕಾರವನ್ನು ಹೇಳುವಾಗಲೇ ಮನಸ್ಸಿಗೆ ಶಾಂತಿಯ ಅನುಭವವಾಗುತ್ತದೆ. ದೀಪಾವಳಿಯಲ್ಲಿ ಎಷ್ಟೊಂದು ದೀಪ ಬೆಳಗಿಸುತ್ತೇವೆ. ಅವೆಲ್ಲ ಕೆಲವೇ ಹೊತ್ತಿನಲ್ಲಿ ನಂದಿ ಹೋಗುತ್ತವೆ. ಆದರೆ ಇಂದು ಮನುಷ್ಯನೊಳಗೆ ಅಡಗಿರುವ ಅಜ್ಞಾನದ ಕತ್ತಲೆಯನ್ನು ದೂರಮಾಡಲು ಆಧ್ಯಾತ್ಮಿಕ ಬೆಳಕಿನೆಡೆಗೆ ಗಮನ ಹರಿಸಿ ಮನುಷ್ಯ ತನ್ನ ಮನಸ್ಸನ್ನ ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ಶೇಖವ್ವ ನೀರಲೋಟಿ, ಪಾಲಾಕ್ಷಯ್ಯ ಅಳಲಿಮಠ, ಬಿ.ವಿ. ಚನ್ನಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ಅಪಘಾತ: ಇಬ್ಬರ ಸಾವು
ಲಕ್ಷ್ಮೇಶ್ವರ:  ಲಕ್ಷ್ಮೇಶ್ವರ ಮತ್ತು ಗೊಜನೂರ ಮಧ್ಯೆ ಬೈಕ್ ಮತ್ತು ಮಿನಿ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಜರುಗಿದೆ. ಮಾಗಡಿ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಲಕ್ಷ್ಮೇಶ್ವರದಿಂದ ಹೋಗುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ ಓರ್ವ ಯುವಕ ಮೃತಪಟ್ಟರೆ, ಇನ್ನೋರ್ವನು ಹುಬ್ಬಳ್ಳಿಯ ಕಿಮ್ಸಗೆ ಸಾಗುತ್ತಿರುವಾಗ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಲ್ಲೇ ಮೃತಪಟ್ಟ ಯುವಕನನ್ನು ಶರಣಪ್ಪ ಬಸಪ್ಪ ಹುಡೇದ (19) ಹಾಗೂ ಹುಬ್ಬಳ್ಳಿಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಮೃತಪಟ್ಟ ಯುವಕನನ್ನು ಈರಣ್ಣ ಈರಪಯ್ಯ ಪೂಜಾರ್ (19) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಸಿಪಿಐ ಶ್ರೀನಿವಾಸ ಮೇಟಿ ಹಾಗೂ ಪಿಎಸ್‌ಐ ವಿಕಾಸ ಲಮಾಣಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎಚ್.ಎಲ್. ಧರ್ಮಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

ನರೇಂದ್ರ ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ: ಹಾವಿನಾಳ
ಮುಂಡರಗಿ: ಅನೇಕ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಸರ್ಕಾರದಿಂದ ಜನರಿಗಾಗಿರುವ ಅನ್ಯಾಯವನ್ನು ಸರಿಪಡಿಸಲು ಕೇವಲ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದು ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು.
ಅವರು ಇದೇ ನ. 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪವನ್ನು ಎನ್‌ಡಿಎ ನಿರ್ಧರಿಸಿದೆ. ಗುಜರಾತ್‌ನಂತಹ ಉತ್ತಮ ಹಾಗೂ ಜನಪರ ಆಡಳಿತಕ್ಕಾಗಿ ಈ ಬಾರಿ ಮೋದಿಯವರಿಗೆ ಎಲ್ಲರೂ ಮತ ನೀಡುವ ಮೂಲಕ ಪ್ರಧಾನಿ ಹುದ್ದೆಗೆ ಏರಿಸಲು ಪಣತೊಡೋಣ ಎಂದರು.  ಸಿದ್ಧಯ್ಯಸ್ವಾಮಿ ಶಿರಹಟ್ಟಿಮಠ, ಗ್ರಾಪಂ ಮಾಜಿ ಅಧ್ಯಕ್ಷ ಕರಿಯಪ್ಪ ಹಡಗಲಿ, ಸದಸ್ಯ ಈರಣ್ಣ ಭಜಂತ್ರಿ, ಬಸವರಾಜ ಗದ್ದಿಕೇರಿ, ಮುಂಡರಗಿ ಪುರಸಭೆ ಸದಸ್ಯ ಶಂಕರಗೌಡ ಪಾಟೀಲ ಮುಂತಾದವರು ಮಾತನಾಡಿದರು. ದೇವಪ್ಪ ಕಂಬಳಿ,  ಬಸಯ್ಯ ಕಲ್ಮಠ, ವೀರಯ್ಯ ಕಣವಿಮಠ, ದ್ಯಾಮಣ್ಣ ಡೊಳ್ಳಿನ, ಸುರೇಶ ಮಾಳೇಕೊಪ್ಪ, ದೇವಪ್ಪ ಇಟಗಿ, ಪರಶುರಾಮ ರಾಮೇನಹಳ್ಳಿ, ಪರಶುರಾಮ ಕರಡಿಕೊಳ್ಳ, ಮೌನೇಶ ದೇಸಾಯಿ, ಪ್ರಭು ಅಬ್ಬೀಗೆರಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶಶಿಮಠ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement