ಭಾವೈಕ್ಯದ ಮಾರನಬಸರಿ ಮೊಹರಂ
ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 10
ಗದಗ ಜಿಲ್ಲೆಯಲ್ಲಿಯೇ ಐತಿಹಾಸಿಕತೆ ಹಾಗೂ ಭಾವೈಕ್ಯತೆಗೆ ಹೆಸರಾದ ಗ್ರಾಮ ಮಾರನಬಸರಿ.
ಇಲ್ಲಿ ಹಿಂದೆ ಸಿದ್ಧನಕೊಳ್ಳದ ಸಿದ್ಧಪ್ಪಜ್ಜ ಇಲಕಲ್ಲ ದರ್ಗಾದ ಮರ್ತುಜಾ ಖಾದ್ರಿಯೊಂದಿಗೆ ಹೊಂದಿದ ಉತ್ತಮ ಸಂಬಂಧದಿಂದ ಹಿಂದೂ-ಮುಸ್ಲಿಮರಲ್ಲಿ ಸಾಮರಸ್ಯ ಮೂಡಿತು. ಇಂದು ಹಿಂದೂ-ಮುಸ್ಲಿಂ ಬಾಂಧವರು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ವಿಭಿನ್ನವಾಗಿ, ವೈಶಿಷ್ಟ್ಯಪೂರ್ಣವಾಗಿ, ಅತ್ಯಂತ ವಿಜೃಂಭಣೆಯಿಂದ ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಗ್ರಾಮವನ್ನು ಮೊದಲು ಮದನಗರ್ಭಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಗ್ರಾಮದ ಕಿಲ್ಲಾ ಎಂಬ ಭಾಗದಲ್ಲಿ ಶಿವಾಜಿ ಮಹಾರಾಜನಿಗೂ ಮತ್ತು ಔರಂಗಜೇಬನ ಮಧ್ಯೆ ಯುದ್ಧ ನಡೆದಿತ್ತೆಂದು ಇತಿಹಾಸದಿಂದ ತಿಳಿಯುತ್ತದೆ. ಯುದ್ಧದ ಸಮಯದಲ್ಲಿ ಗ್ರಾಮದ ಹಿರಿಕ ವೆಂಕೋಬಾರಾಯ ತಮ್ಮ ಏರುಧ್ವನಿಯಲ್ಲಿ ಮಾರ್‌ಬಸ್ ಎಂದರೆ ಹೊಡೆದಾಡುವುದನ್ನು ನಿಲ್ಲಿಸಿ ಎಂದು ಗುಡುಗಿದರಂತೆ, ಅದರ ಪ್ರತೀಕವಾಗಿ ಈ ಗ್ರಾಮಕ್ಕೆ ಮಾರನಬಸರಿ ಎಂಬ ಹೆಸರು ಬಂದಿದೆಯಂತೆ.
ಹಬ್ಬದ ಸಿದ್ಧತೆ: ಈ ಭಾಗದಲ್ಲಿ ಮೊಹರಂ ಹಬ್ಬಕ್ಕೆ 15-20 ದಿನಗಳ ಮುಂಚಿತವಾಗಿಯೇ ಗ್ರಾಮದ ಸಮಸ್ತ ಜನತೆ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಇಲ್ಲಿ 5 ದಿನ ಗ್ರಾಮವು ವಿದ್ಯುತ್ ಅಲಂಕಾರದಿಂದ ರಾರಾಜಿಸುತ್ತದೆ. ಹಬ್ಬದ 5 ದಿನಗಳಲ್ಲಿ 3 ದಿನ ಪವಾಡಗಳು ನಡೆಯುತ್ತವೆ. ಇದೇ ನ. 12 ರಂದು ಸಂದಲ ರಾತ್ರಿಯನ್ನು ಪವಾಡದ ರಾತ್ರಿ ಎಂದೇ ಹೇಳಲಾಗುತ್ತದೆ. ಈ ದಿನ ದೊಡ್ಡಮಸೀದಿಯ ಕುದುರೆ ದೇವರು ಈದ್ಗಾ ಬಳಿ ಇರುವ ಗೂಡಸಾಬ ಅಜ್ಜನ ಗೋರಿಗೆ ತೆರಳಿ ದರ್ಶನ ಪಡೆಯುತ್ತದೆ. ನ. 13 ರಂದು ಕತ್ತಲರಾತ್ರಿ, ಇದು ಮಹತ್ವಪೂರ್ಣದಿನ. ಅಂದು ಈ ಗ್ರಾಮಕ್ಕೆ ಬೇರೆ ಬೇರೆ ರಾಜ್ಯಗಳಿಂದ ರಾತ್ರಿ ನಡೆಯುವ ಪವಾಡಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿ ದೊಡ್ಡ ಮಸೀದಿಯ ಮುಜಾವರರು ರಾತ್ರಿ 12 ಗಂಟೆಗೆ ರೈತ ಬೆಳೆಯುವ ವಿವಿಧ ಬೀಜಗಳನ್ನು ಮಣ್ಣಿನೊಂದಿಗೆ ತಂಬಿಗೆಯಲ್ಲಿ ಹಾಕುತ್ತಾರೆ. ಇವು 2 ಗಂಟೆಗಳಲ್ಲಿ ಮೊಳಕೆಯೊಡೆಯುತ್ತವೆ. ಆ ತಂಬಿಗೆಯಲ್ಲಿ ಯಾವ ಬೀಜ ಅತಿ ಹೆಚ್ಚು ಮೊಳಕೆಯೊಡೆದಿರುತ್ತದೆಯೋ ಅದೇ ಬೆಳೆ ಭೂತಾಯಿಯಲ್ಲಿಯೂ ಬೆಳೆಯುತ್ತದೆ ಎಂಬ ನಂಬಿಕೆ ಈ ಭಾಗದ ಜನರದ್ದಾಗಿದೆ. ಇದರಂತೆ ಇನ್ನೂ ಹೆಚ್ಚಿನ ಪವಾಡಗಳು ನಡೆಯುತ್ತವೆ.
ದೇವರಲ್ಲಿ ಪ್ರಾರ್ಥನೆ: ಕತ್ತಲ ರಾತ್ರಿಯಂದು ಮಧ್ಯರಾತ್ರಿ 2 ಗಂಟೆಗೆ ಚಿಕ್ಕ ಮಸೀದಿಯಿಂದ ದೊಡ್ಡಮಸೀದಿಗೆ ಗಂಧ ಹೊರಡುವವರೆಗೂ ದೊಡ್ಡ ಮಸೀದಿಯ ದೇವರು ಏಳುವುದಿಲ್ಲ. ಎರಡು ಮಸೀದಿಯ ದೇವರು ಎದ್ದನಂತರ ಭಕ್ತರಿಗೆ ದರ್ಶನ ನೀಡಲು ಹೊರಡುತ್ತವೆ. ಆಗ ಭಕ್ತರು ತಮ್ಮ ಮನದಲ್ಲಿ ದೇವರನ್ನು ನೆನೆಯುತ್ತಾ ತಮ್ಮ ಕಷ್ಟ, ಕಾರ್ಪಣ್ಯ ಪರಿಹರಿಸಲು ಪ್ರಾರ್ಥಿಸುತ್ತಾರೆ. ಆಗ ಭಕ್ತಿಯಿಂದ ದೇವರು ಭಕ್ತನ ಭಕುತಿಗೆ ಮೆಚ್ಚಿಬಂದು ಉಡಿ ತುಂಬಿದಲ್ಲಿ ಆ ಭಕ್ತನ ಕಷ್ಟಕಾರ್ಪಣ್ಯಗಳು, ಬೇಡಿಕೆಗಳು ಮುಂಬರುವ ವರ್ಷದೊಳಗಾಗಿ ಈಡೇರುತ್ತವೆ ಎಂಬುದು ಜನರ ನಂಬಿಕೆ.
ಅನಾರೋಗ್ಯ ಪೀಡಿತರಿಗೆ ಉಂಗುರ: ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಹಬ್ಬದ ಆಸುಪಾಸು 9 ದಿನ ಹೊರತುಪಡಿಸಿ, ವರ್ಷದುದ್ದಕ್ಕೂ ವಾರದ 2 ದಿನ (ಗುರುವಾರ ಮತ್ತು ಭಾನುವಾರ) ಇಲ್ಲಿ ರೋಗ ಪೀಡಿತರಿಗೆ, ಕೈಕಾಲು ನೋವು, ಮೂಲವ್ಯಾಧಿ, ವಾತ, ಹರಿವಾತ, ಹಿಂಬಡಸೂಲ, ತಲೆನೋವು ಹೀಗೆ ಇನ್ನಿತರ ರೋಗಗಳಿಗೆ, ವೈದ್ಯರಿಂದ ಗುಣಮುಖವಾಗದ ರೋಗಗಳಿಗೂ ಇಲ್ಲಿ ಉಂಗುರ ಹಾಕಿಸುವುದರಿಂದ ಗುಣವಾಗುತ್ತದೆ ಎನ್ನುವುದು ಜನರ ನಂಬಿಕೆ. ಇಲ್ಲಿ ಉಂಗುರ ಹಾಕಿಸಿಕೊಳ್ಳುವವರು ಮಸೀದಿಯ ಪಕ್ಕದಲ್ಲಿರುವ ಭಾವಿಯ ನೀರನ್ನು ಬಳಸಿ ಸ್ನಾನ ಮಾಡಿದ ಮೇಲೆ ಮಾತ್ರ ಉಂಗುರ ಹಾಕಲಾಗುತ್ತದೆ. ಆದರೆ ಹಾಕಿದ ಉಂಗುರ ಯಾವುದೇ ಕಾರಣಕ್ಕೂ ಬೆರಳಿನಿಂದ ಕಳಚಬಾರದೆಂಬುದು ವಾಡಿಕೆ.
ದೇವರಿಗೆ ಗುನಗಡಗಿ: ಇಲ್ಲಿ ಇರುವ 6 ದೇವರುಗಳಿಗೂ ಗುನಗಡಗಿ ಧರಿಸಲಾಗಿದೆ. ಇದರಿಂದಲೇ ತಿಳಿದುಬರುತ್ತದೆ ಇಲ್ಲಿ ಹಿಂದೂ ಮುಸ್ಲಿಂ ಬಾಂಧವರ ಬಾಂಧವ್ಯ ಎಷ್ಟಿದೆ ಎನ್ನುವುದು. ಇಲ್ಲಿ ಸರ್ವರೂ ಸಮಾನರು, ಎಲ್ಲರೂ ಒಂದೇ ಎಂಬ ಭಾವನೆಯನ್ನು ಎತ್ತಿ ತೋರಿಸುತ್ತದೆ.
-ನಿಂಗರಾಜ ಬೇವಿನಕಟ್ಟಿ