ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ
ಲಕ್ಷ್ಮೇಶ್ವರ: ಎಲ್ಲ ಪದವೀಧರ ಮತದಾರರು ಪ್ರಜ್ಞಾವಂತರಾಗಿದ್ದು ಈ ಬಾರಿ ಉತ್ತಮ ಆಯ್ಕೆಯನ್ನು ಮಾಡುತ್ತಾರೆ ಎಂದು ಅಖಿಲ ಕರ್ನಾಟಕ ಪದವೀಧರ ಒಕ್ಕೂಟ ಹಾಗೂ ರಾಜ್ಯ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಟಿ. ಈಶ್ವರ ತಿಳಿಸಿದ್ದಾರೆ.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2ನೇ ಹಂತದ ನೋಂದಣಿ ಅಭಿಯಾನವನ್ನು ಕಳೆದ 4 ದಿನಗಳಿಂದ ಕಾರವಾರ, ಹಾವೇರಿ, ಧಾರವಾಡ, ನರಗುಂದದಲ್ಲಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಮುಂಡರಗಿ, ಶಿರಹಟ್ಟಿ ರೋಣ ಗದಗದಲ್ಲಿ ಕೈಗೊಳ್ಳಲಾಗುವುದು ಎಂದರು. ಕಾಂಗ್ರೆಸ್ ಪಕ್ಷದ ಬೆಂಬಲವಾಗಿ ಸಾಹಿತಿಗಳು, ವಕೀಲರು, ಶಿಕ್ಷಣ ಪರಿಣಿತರು, ಸರ್ಕಾರಿ, ಅರೆ ಸರ್ಕಾರಿ ಪದವೀಧರ ನೌಕರ ವರ್ಗದವರು, ಅಖಿಲ ಕರ್ನಾಟಕ ಪದವೀಧರ ಒಕ್ಕೂಟದ ಸುಮಾರು 39 ಸಾವಿರ ಸದಸ್ಯರು ಸಂಪೂರ್ಣ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪೋಟೊ, ಪ್ಲೆಕ್ಸ್, ಬ್ಯಾನರ್ಗಳನ್ನು ಮುಂದಿಟ್ಟುಕೊಂಡು, ಸುಳ್ಳು ಭರವಸೆ ನೀಡುತ್ತಿರುವುದನ್ನು ಗಮನಿಸುತ್ತಿರುವ ಪದವೀಧರರು ನೋಂದಣಿ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಜತೆ ಅತ್ಯಂತ ಉತ್ಸಾಹದಲ್ಲಿ ಭಾಗಿಯಾಗುತ್ತಿದ್ದಾರೆ. ನ. 15ರವರೆಗೆ ಚುನಾವಣಾ ಆಯೋಗ ಪದವಿ ಮತದಾರರ ನೋಂದಣಿಗೆ ಅವಧಿ ವಿಸ್ತರಿಸಿದ್ದು, 3ನೇ ಹಂತದಲ್ಲಿ ಕ್ಷೇತ್ರದಲ್ಲಿ ನೋಂದಣಿ ಕಾರ್ಯ ಕೈಗೊಂಡು ಇನ್ನೂ 4 ಸಾವಿರ ಮತದಾರರ ನೋಂದಣಿ ಮಾಡಿಸಲಾಗುವುದು ಎಂದರು.