ಮನೆ, ಮೂಲ ಸೌಲಭ್ಯ ಒದಗಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಗದಗ, ನ. 10
ನರಸಾಪುರ ಆಶ್ರಯ ಕಾಲೋನಿಯಲ್ಲಿ ಸುಮಾರು 12 ವರ್ಷದಿಂದ ಅನಧಿಕೃತವಾಗಿ ವಾಸವಾಗಿರುವ ಬಡಕುಟುಂಬಗಳಿಗೆ ಮನೆಗಳನ್ನು ಮಂಜೂರು ಮಾಡಲು ಹಾಗೂ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಭಾನುವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ನರಸಾಪುರ ಆಶ್ರಯ ಕಾಲೋನಿ ನಿವಾಸಿಗಳ ಹೋರಾಟ ಸಮಿತಿ ಪದಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಗದಗ ಜಿಲ್ಲಾ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.
ಸಚಿವರು ನರಸಾಪುರ ಆಶ್ರಯ ಕಾಲೋನಿ ಹತ್ತಿರ ನಿರ್ಮಲ ನಗರ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಬಂದ ಸಂದರ್ಭದಲ್ಲಿ ಸಚಿವರಿಗೆ ಸಮಿತಿಯ ಪದಾಧಿಕಾರಿಗಳು ಮನವಿ ನೀಡಿ, 2001ರಲ್ಲಿ ನಗರದಲ್ಲಿ ನರಸಾಪುರ ಆಶ್ರಯ ಕಾಲೋನಿ ನಿರ್ಮಿಸಲಾಗಿದೆ. ಮೂಲ ಫಲಾನುಭವಿಗಳು ಮನೆಗಳಿಗೆ ಬಂದು ವಾಸ ಮಾಡದೇ ಇರುವ ಸಂದರ್ಭದಲ್ಲಿ ನಗರದ ವಿವಿಧ ಗುಡಿಸಲು ನಿವಾಸಿಗಳು, ಬಾಡಿಗೆದಾರರು ಬಡಕುಟುಂಬಗಳು ಸುಮಾರು 12 ವರ್ಷದಿಂದ ಕೀಲಿ ಹಾಕಿರುವ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಂತಹ ಬಡಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಬೇಕು.
ಈ ಕುರಿತು ಅನೇಕ ಬಾರಿ ಸಂಘಟನೆಗಳಿಂದ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಆದರೆ ಈವರಗೊ ಬಡಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ. ತಕ್ಷಣ ಅಂತಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಿ ಹಕ್ಕುಪತ್ರಗಳನ್ನು ನೀಡಬೇಕು. ಇಲ್ಲದೇ ಹೋದಲ್ಲಿ ಸಮಿತಿಯಿಂದ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ದೇವಪ್ಪ ಭರಮಣ್ಣನವರ, ಕಾರ್ಯದರ್ಶಿ ರಸೂಲಸಾಬ ಮುಳಗುಂದ, ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ನಾಶೀರ ಮಕಾಂದಾರ, ರಾಜು ತಾಳಿಕೋಟಿ, ಮಹ್ಮದರಫೀಕ್ ಶೇಖ, ದೇವಕ್ಕ ತಳವಾರ, ದೇವಕ್ಕ ತೊಂಡಿಹಾಳ, ರತ್ನಾ ಪವಾರ, ಹುಸೇನಸಾಬ್ ಪಲ್ಲೇದ, ವೆಂಕಟೇಶ ಕೋಣಿ ಮುಂತಾದವರು ಉಪಸ್ಥಿತರಿದ್ದರು.