ಮಹಿಳೆಯರಿಗೆ ಪುಷ್ಪ ಕೃಷಿ ತರಬೇತಿ
ಗಜೇಂದ್ರಗಡ: ಸ್ಥಳೀಯ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಕೃಷಿ ರೈತ ಕ್ಷೇತ್ರ ಕುರಿತು ಪುಷ್ಪ ಕೃಷಿ ತರಬೇತಿ ನೀಡಲಾಯಿತು.
ಪಟ್ಟಣದ ಹೊರವಲಯದ ಗೊಂಗಡಶೆಟ್ಟಿಯವರ ಪುಷ್ಪ ತೋಟದಲ್ಲಿ ಮಹಿಳಾ ಸದಸ್ಯರಿಗೆ ಪುಷ್ಪ ಕೃಷಿ ಕುರಿತು ಮಾಹಿತಿ ನೀಡಿದ ಬಳಿಕ ಗಜೇಂದ್ರಗಡ ವಲಯ ಅಧಿಕಾರಿ ಎಚ್. ಲೋಹಿತ್ ಮಾತನಾಡಿ, ನಾಡಿನ ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬನೆ ಬದುಕು ಸಾಗಿಸಲು ಗೃಹ ಕೈಗಾರಿಕೆ, ಹೈನುಗಾರಿಕೆ ಜತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಮುಂದಾಗಿ ಎಂದ ಅವರು, ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಯುವ ಪುಷ್ಪ ಕೃಷಿ ಅತ್ಯಂತ ಲಾಭದಾಯಕವಾದದ್ದು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಎಂದರು. ಕೃಷಿ ಮತ್ತು ಹೈನುಗಾರಿಕಾ ಅಧಿಕಾರಿ ಎಸ್.ಕೆ. ರುದ್ರಪ್ಪ ವಿವಿಧ ಪುಷ್ಪ ತಳಿ ಬೆಳೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾಲಕಾಲೇಶ್ವರ ಒಕ್ಕೂಟ ಅಧ್ಯಕ್ಷೆ ಹುಸೇನಭಿ ಕಟ್ಟಿಮನಿ ಮುಂತಾದವರು ಮಾತನಾಡಿದರು. ಶಿಲ್ಪಾ ತಳವಾರ, ಶೋಭಾ ಜಾನಾಯಿ, ಗೀತಾ ಮೂಲಿಮನಿ, ಮಂಜುಳಾ ಶಿಂಗ್ರಿ, ಪಾರ್ವತಿ ಮಗಜಿ, ಫಾತೀಮಾ ನಂದಿಹಾಳ, ಶಕೀಲಾ ಸುರಪುರ, ಮುದಕವ್ವ ಅಗ್ನೂರ, ಅನಿತಾ ಕುಂಬಾರ, ಶಶಿಕಲಾ ಸವಣೂರ, ಉಪಸ್ಥಿತರಿದ್ದರು.